Wednesday, February 25, 2009

ಜೋಡೀದಾರ್ ನಾಗರಾಜಯ್ಯ

"ಜೋಡೀದಾರ್ ನಾಗರಾಜಯ್ಯ ,ಲ್ಯಾಂಡ್ ಲಾರ್ಡ್, ಜೋಡಿ ಹರಿಹರಪುರ, ದೊಡ್ದಕುಂಚೆ-ಅಂಚೆ, ಹಳೇಕೋಟೆ ಹೋಬಳೀ,ಹೊಳೇ ನರಸೀಪುರ -ತಾಲ್ಲೂಕ್,ಹಾಸನ ಜಿಲ್ಲೆ." ಇದು ನಮ್ಮಪ್ಪನ ವಿಳಾಸ. ಹೀಗೆ ಎಲ್ಲರೂ ಬರೆಯುತ್ತಿರಲಿಲ್ಲ. ನಮ್ಮ ಸೋದರತ್ತೆ, ಅವರ ಮಕ್ಕಳು ಒಂದಾಣೆ ಕಾಗದ ಬರೆದರೆ ಹೀಗೆ ಅಡ್ರೆಸ್ಸ್ ಬರೆಯುತ್ತಿದ್ದರು. ನಾನಿನ್ನೂ ಚಿಕ್ಕ ಹುಡುಗ, ಆಗ ಏನೂ ಅನ್ನಿಸುತ್ತಿರಲಿಲ್ಲ. ಈಗ ಹಾಗೇ ಯೋಚಿಸುವಾಗ ನಮ್ಮಪ್ಪನಿಗೆ ಜೋಡೀದಾರ್ ಅಂತಾ ಕಾಗದ ಬರುತ್ತಿತ್ತಲ್ಲ. ಹಾಗಂದರೇನು? ಲ್ಯಾಂಡ್ ಲಾರ್ಡ್ ಅಂತಾ ಬೇರೆ ಬರೆಯುತ್ತಿದ್ದರು. ಆದರೆ ನಮ್ಮ ಮನೆಯ ನೈಜಸ್ಥಿತಿ ಹಾಗಿರಲೇ ಇಲ್ಲ ವಲ್ಲಾ? ಜೋಡೀದಾರರ ಮಕ್ಕಳಿಗೆ ನಿತ್ಯ ಉಪವಾಸ. ಕೇವಲ ಹುರುಳೀ ಕಾಳು ತಿಂದು ಕಾಲ ಹಾಕಿದ ದಿನಗಳು, ಕೇವಲ ಕಾಡಿನಿಂದ ತಂದ ನೇರಲೆ ಹಣ್ಣು ತಿಂದು ಕಾಲ ಹಾಕಿದ ದಿನಗಳು, ರಾಗಿರೊಟ್ಟಿಯೋ, ಮುದ್ದೆಯೋ, ಅನ್ನದ ಗಂಜಿಯೋ, ಜೋಳದ ರೊಟ್ಟಿಯೋ ಯಾವುದಾದರೂ ಸಿಕ್ಕರೆ ಸಾಕಾಗಿತ್ತು. ಅಷ್ಟೇಕೆ ಮಂಜಪ್ಪನವರಮನೆಯ ಸೀತಮ್ಮನಿಗೂ ನಮ್ಮ ಸೋದರತ್ತೆ ಗೌರಮ್ಮನಿಗೂ ಗಳಸ್ಯ ಗಂಟಸ್ಯ.[ನಮ್ಮ ಗೌರತ್ತೆ ಬಗ್ಗೆ ಪ್ರತ್ಯೇಕ ಬರೆದಿರುವೆ. ಮದುವೆಯಾಗಿ ತನ್ನ ಹನ್ನೆರಡನೆಯ ವಯಸ್ಸಿನಲ್ಲೇ ವಿಧವೆಯಾಗಿ ನಮ್ಮ ಮನೆಯಲ್ಲೇ ಉಳಿದ ನಮ್ಮ ಅಪ್ಪನ ಅಕ್ಕ] ಪಾಪ! ಅವರಿಗೆ ತಮ್ಮನ ಮಕ್ಕಳೆಂದರೆ ಪಂಚ ಪ್ರಾಣ. " ಲೇ ಸೀತಮ್ಮ ನಿತ್ಯವೂ ನಿಮ್ಮನೇಲೀ ಅನ್ನ ಚೆಲ್ತೀರ. ಅದರ ಬದಲು ಉಳಿದಿದ್ದಾಗ ಹೇಳೇ, ನಮ್ಮ ಮನೆಯ ಮಕ್ಕಳಿಗಾದರೂ ತಂದು ಬಡಿಸುತ್ತೇನೆ." ನಮ್ಮತ್ತೆ ಸೀತಮ್ಮನ ಹತ್ತಿರ ಅಂಗಲಾಚಿದ ಮೇಲೆ ಅನೇಕ ದಿನಗಳು ಸೀತಮ್ಮ ನವರಮನೆಯಲ್ಲಿ ಉಂಡು ಉಳಿದ ಅನ್ನವನ್ನು ಕೊಡುತ್ತಿದ್ದರು. ಅದೇ ನಮಗೆ ಮೃಷ್ಟಾನ್ನ.
ಇಷ್ಟು ಹೇಳಿದ ಮೇಲೆ ನಮ್ಮ ಮನೆಯ ಕಷ್ಟಗಳನ್ನು ವಿವರಿಸುವ ಅಗತ್ಯವಿಲ್ಲ. ಹೊಟ್ಟೆ ಪಾಡಿಗೆ ಏನಾದರೂ ಮಾಡಬೇಕಲ್ಲಾ, ನಮ್ಮ ಅತ್ತೆ ಹಾಗೂ ನಮ್ಮಪ್ಪ ಕಾಡಿಗೆ ಹೋಗಿ ಮುತ್ತುಗದ ಎಲೆ ಕೊಯ್ದು ತರುತ್ತಿದ್ದರು. ಮನೆಮಂದಿಯೆಲ್ಲಾ ಅದನ್ನು ಒಪ್ಪ-ಓರಣ ಮಾಡಿ ಹಗಲು ರಾತ್ರಿಯೆಲ್ಲಾ ಎಲೆಹಚ್ಚಿ ಮಾರಿದರೆ ನೂರು ಎಲೆಗೆ ಎಂಟಾಣೆ. ಈ ಹಣಕ್ಕೆ ಆಗಲೂ ಒಂದು ಸೇರು ಅಕ್ಕಿ ಸಿಗುತ್ತಿರಲಿಲ್ಲ. ಊರಲ್ಲಿರುವ ಅತಿ ಎತ್ತರದ ತೆಂಗಿನಮರ ಯಾರದೇ ತೋಟದಲ್ಲಿರಲಿ ಅದನ್ನು ಹತ್ತಿ ಕಾಯಿ ಕೆಡವಿದರೆ ಒಂದು ಮರಕ್ಕೆ ಒಂದು ತೆಂಗಿನಕಾಯಿ ಕೂಲಿ.
ಇನ್ನು ನಮ್ಮ ಅಜ್ಜನ ಶ್ರಾದ್ಧ ಮಾಡುವಾಗಲೆಲ್ಲಾ ಪ್ರತಿ ವರ್ಷವೂ ಶ್ಯಾನುಭೋಗ್ ನಂಜಪ್ಪನವರ ಅಂಗಡಿಗೆ ಹೋಗಿ ಒಂದು ಬೆಳ್ಳಿ ಬಟ್ಟಲು ಅಡವಿಟ್ಟು ಒಂದೈದು ರೂಪಾಯಿ ತಂದು ಅಪ್ಪನ ತಿಥಿ ಮಾಡಬೇಕು. ಅದಕ್ಕೆ ಆಣೆ ಬಡ್ದಿ ಕೊಡುತ್ತಿದ್ದುದು ಬೇರೆ ಮಾತು.
ಇವೆಲ್ಲಾ ಯಾಕೆ ಬರೆದೆ ಅಂತೀರಾ? ಹಿಂದೆ ಜೋಡೀದಾರರೂ ಅಂದರೆ ಯಾವುದೋ ಹಳ್ಳಿಯ ಒಡೆಯರು ಅಂತಾನೆ ಭಾವನೆ ಅಲ್ಲವೇ? ಆದರೆ ಇದು ಜೋಡೀದಾರರಾಗಿದ್ದ ನಮ್ಮಪ್ಪನ ನೈಜ ಸ್ಥಿತಿ.
ಒಂದಂತೂ ನಮ್ಮಪ್ಪನ ಬಗ್ಗೆ ನಮಗೆ ಹೆಮ್ಮೆ ಇದೆ. ಎಷ್ಟೆ ಬಡತನವಿದ್ದರೂ ಕಳ್ಳತನ ಮಾಡಲಿಲ್ಲ, ಬೇರೆಯವರಿಗೆ ದ್ರೋಹ ಮಾಡಲಿಲ್ಲ. ಪಾಪ! ಅವೆಲ್ಲಾ ಮಾಡಲು ಬಾರದ ಮುಗ್ಧರು ನಮ್ಮಪ್ಪ. ಹಿಂದೆ ಹಿಂದುಳಿದ ಜಾತಿಯವರಿಗೆ ದ್ರೋಹ-ಮೋಸ ವಾಗಿರುವುದರ ಜೊತೆಗೆ ಮುಂದುವರಿದ ಜಾತಿಯಲ್ಲಿ ಹುಟ್ಟಿದ ನಮ್ಮಂತವರಿಗೂ ಆಗಿರುವ ಅನ್ಯಾಯ, ಶ್ರೀಮಂತರೆನಿಸಿಕೊಂಡವರು ನಡೆಸಿಕೊಂಡ ರೀತಿ ಹೇಳಿದರೆ ಕೆಲವರಿಗೆ ತುಂಬಾ ಮುಜುಗರ ವಾಗುತ್ತೆ. ಒಂದು ಮಾತು ಹೇಳಿ ಲೇಖನ ಮುಗಿಸುವೆ. ಶೃಂಗೇರಿ ಮಠಾದೀಶರ ದರ್ಶನ ನಮ್ಮಂತವರಿಗಲ್ಲವೆಂದು ನನ್ನ ನಲವತ್ತನೆಯ ವಯಸ್ಸಿನವರೆಗೂ ನನ್ನ ನಂಬೆಕೆಯಾಗಿತ್ತು. ಸೇಬು ಶ್ರೀಮಂತರು ಮಾತ್ರ ತಿನ್ನುವ ಹಣ್ಣು ಎಂಬುದು ನನ್ನ ಅಂದಿನ ನಂಬಿಕೆ. ಅವಕ್ಕೆಲ್ಲಾ ಅಷ್ಟು ತಲೆ ಕೆಡಸಿಕೊಳ್ಳಲೇ ಇಲ್ಲ. ಅಷ್ಟೇಕೆ ನನ್ನ ಮದುವೆಗೆ ಆರು ತಿಂಗಳು ಮುಂಚೆ ನನ್ನ ಮುಂಜಿ ಶಾಸ್ತ್ರವಾಯ್ತು. ಅದೂ ನನಗೆ ಕೆಲಸ ಸಿಕ್ಕಿದ್ದರಿಂದ. ನನ್ನ ಉಪನಯನ ಬಗ್ಗೆ ತಲೆ ಕೆಡಸಿಕೊಳ್ಳಲಿಲ್ಲವೆಂದ ಮೇಲೆ ಇನ್ನು ವೇದ ಪಾಠ?

3 comments:

Unknown said...

ಶ್ರೀ ಶ್ರೀಧರ್ ಅವರೇ..
ನಿಜವಾಗಲೂ ಮನ ತುಂಬಿ ಬಂತು..
ಈ ತರಹದ ಕತೆ ನಾನು ಎಷ್ಟೇ ಬಾರಿ ಕೇಳಿದ್ದರೂ, ಅದೇನೋ ಗೊತ್ತಿಲ್ಲ, ಇನ್ನೂ ಕೇಳೋಣ ಅಂತಾನೇ ಅನ್ನಿಸುತ್ತೆ..
ಈ ರೀತಿಯ ಭಾವನೆಗಳನ್ನ ನಿಮ್ಮಂತವರು ಹಂಚಿಕೊಂಡಾಗ..ನಿಜವಾಗಲೂ ಕಣ್ತುಂಬಿ ಬರುತ್ತೆ..
ಧನ್ಯವಾದ ಸರ್ ನಿಮಗೆ.. ಹೃದಯ ತಟ್ಟಿ ಹೇಳಿದ ಈ ಮಾತಿಗೆ..

ನಿಮ್ಮೊಲವಿನ..
ಸತ್ಯ.

ಹರಿಹರಪುರ ಶ್ರೀಧರ್ said...

ಸತ್ಯ ಘಟನೆಗಳು ಹಾಗೆ ಪರಿಣಾಮ ಉಂಟುಮಾಡಬಹುದು.ಶ್ರೀ ಸತ್ಯಚರಣರೇ, ನನ್ನ ಮಕ್ಕಳಿಗಾಗಿ ನನ್ನ ನಿಜಜೀವನ ದಾಖಲಿಸುತ್ತಿರುವೆ. ಇದು ಅದರ ಒಂದು ತುಣುಕು, ಅಷ್ಟೆ.ಹಿಂದೆ ಬಹುಪಾಲು ಜನರ ಜೀವನ ಹೀಗೆಯೇ ಇತ್ತು. ಆದಿನಗಳು ಅಷ್ಟು ಸುಭಿಕ್ಷವಾಗಿರಲಿಲ್ಲ. ಅಥವಾ ಇದ್ದವರ ಮನಸ್ಥಿತಿ ಸಂಕುಚಿತವಾಗಿತ್ತು. ನಿಮ್ಮಂತ ಯುವಕರು ಹಿಂದಿನವರ ಜೀವನ ಹೋರಾಟವನ್ನು ತಿಳಿದುಕೊಂಡಿದ್ದರೆ ಜೀವನ ಎದುರಿಸುವ ಸಾಮರ್ಥ್ಯ ಹೆಚ್ಚಬಹುದು, ಎಂಬುದು ನನ್ನ ಅಭಿಪ್ರಾಯ.ನಿಮ್ಮ ಆಸಕ್ತಿ ನೋಡಿ ಸಂತಸವಾಗಿದೆ.

ಮಂಜುನಾಥ್.ಡಿ.ಜೆ said...

www.hassanyana.blogspot.com