Monday, January 12, 2009

ಮಕರ ಸಂಕ್ರಾಂತಿಗೆ ಮುನ್ನಾ......

ಮಕರ ಸಂಕ್ರಾಂತಿಗೆ ಮುನ್ನಾದಿನವಾದ ಇಂದು ಮಿತ್ರರಿಗೆ ಶುಭಕೋರಬೇಕೆನ್ನುವ ಆಲೋಚನೆ ಬಂದಾಗ ಮಸ್ತಕದಲ್ಲೊಂದು ಸಂಕ್ರಮಣ ನಡೆದಿದೆ. ಕಾಟಾಚಾರಕ್ಕೆ ಶುಭ ಕೋರುವುದೇ? ಒಂದು ದಶಕಗಳಿಂದ ನಮ್ಮ ದೇಶದಲ್ಲಿ ಎಷ್ಟು ಅಲ್ಲೋಲ ಕಲ್ಲೋಲವಾಗುತ್ತಿದೆ! ಇತ್ತೀಚಿನ ಭಯೋತ್ಪಾದನೆಯ ಹೇಯ ಕೃತ್ಯವನ್ನಂತೂ ಮರೆಯಲು ಸಾಧ್ಯವಾಗುತ್ತಲೇ ಇಲ್ಲ.ಏಕೆ ಹೀಗೆ? ನಮ್ಮ ದೇಶಕ್ಕೆ ಏನಾಗಿದೆ? ಎಲ್ಲೋ ಏನೋ ತಪ್ಪಾಗಿದೆ. ಆಗ ನನ್ನ ಮನಸ್ಸಿನ ಪರದೆಯೆದುರು ಒಂದುಕಡೆ ಲಾರ್ಡ್ ಮೆಕಾಲೆ, ಜವಾಹರಲಾಲ್ ನೆಹರು, ಮಹಾತ್ಮ ಗಾಂಧೀಜಿ ಮತ್ತೊಂದು ಕಡೆ ಅನೇಕ ಕ್ರಾಂತಿ ಕಾರಿಗಳ ಚಿತ್ರಗಳು ಸುಳಿದಾಡುತ್ತವೆ! ಇದೇನು! ನನಗೇ ನಾಗಿದೆ ? ನನ್ನ ಮನದಲ್ಲಿ ಏನೋ ಕೋಲಾಹಲ!! ನನ್ನ ಮನಸ್ಸಿನ ಭಾವನೆಗಳನ್ನು ಸಂಪದಿಗರ ಮುಂದೆ ಬಿಚ್ಚಿಡುವ ಮನಸ್ಸಾಗುತ್ತದೆ.......... ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳಾಯ್ತು. ಸ್ವಾತಂತ್ರ್ಯ ಬಂದಾಗ ಹುಟ್ಟಿದ ಒಂದು ಮಗು ಬೆಳೆದು ದೊಡ್ದವನಾಗಿ ಒಂದು ಕುಟುಂಬದ ಯಜಮಾನನಾಗಿ , ಈಗ ವಾನಪ್ರಸ್ತಾಶ್ರಮದ ಕಡೆ ಸಾಗುವ ಪ್ರಯತ್ನದಲ್ಲಿದ್ದಾನೆ. ಆದರೆ ಇದೇ ಅವಧಿಯಲ್ಲಿ ನಮ್ಮ ದೇಶದ ಪ್ರಗತಿ ಏನು? ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಅದೆಷ್ಟು ಜನ ಪ್ರಾಣ ತೆತ್ತಿದ್ದಾರೆ! ಭಗತ್ಸಿಂಗ್,ಸಖದೇವ್, ರಾಜಗುರು, ಸಾವರ್ಕರ್, ಚಂದ್ರಶೇಖರ ಆಜಾದ್... ಇಂತಹ ಸಹಸ್ರಾರು ಜನ ದೇಶಭಕ್ತರು ತಮ್ಮ ಪ್ರಾಣವನ್ನು ಬಲಿಕೊಟ್ಟು ಗಳಿಸಿದ ಸ್ವಾತಂತ್ರ್ಯದ ಹಿಂದೆ ಅವರ ಗುರಿ ಏನಿತ್ತು? ಅವರ ಕನಸು ಏನಿತ್ತು? ದೇಶದ ಪ್ರಗತಿ ಎಂದರೆ ಏನು? ದೊಡ್ದ ದೊಡ್ದ ಕಾರ್ಖಾನೆಗಳೇ? ದೊಡ್ದ ದೊಡ್ದ ಕಟ್ಟಡಗಳೇ? ಜಲಾಶಯಗಳೇ? ರಸ್ತೆಗಳೇ? ....ಏನು? ಹಾಗಾದರೆ ನಮ್ಮ ರಾಷ್ಟ್ರದ ಆಂತರಿಕ ಪ್ರವಾಹ ಯಾವುದು? ಬೇರೆಲ್ಲಾ ರಾಷ್ಟ್ರಗಳಿಗಿಂತ ನಮ್ಮ ರಾಷ್ಟ್ರದ ಈ ಅಂತರ್ಪ್ರವಾಹವು ಬಹಳ ಬಿನ್ನವಾದುದು. ಇದರಮೂಲ ಋಷಿಗಳ ಪದತಲದಲ್ಲಿದೆ.ಆತ್ಮ ಚಿಂತನೆಯನ್ನು ಮಾಡುತ್ತಾ, ಇಂದ್ರಿಯಗಳನ್ನು ನಿಗ್ರಹಿಸಿ, ಸತ್ಯದಶೋಧನೆಗಾಗಿ ನೂರಾರು ವರ್ಷಗಳು ಸತತ ತಪಸ್ಸನ್ನಾಚರಿಸಿ ಸತ್ಯದ ಶೋಧನೆ ಮಾಡಿದರು, ಎಲ್ಲರಿಗೂತಿಳಿಸಿದರು, ಜಗತ್ತಿಗೇ ಒಳ್ಳೆಯದಾಗಲೀ ಎಂದು ಒಂದು ಜೀವನ ಕ್ರಮವನ್ನು ನಮಗೆ ಕೊಟ್ಟರು ಅದು " ಹಿಂದುಸಂಸ್ಕೃತಿ, ಸನಾತನ ಸಂಸ್ಕೃತಿ, ಋಷಿಸಂಸ್ಕೃತಿ," ಎಂದು ಕರೆಯಲ್ಪಟ್ಟಿತು. ಇಂತಹ ಒಂದು ಸಂಸ್ಕೃತಿಯು ನಮ್ಮ ದಾಗಿರುವುದರಿಂದ ನಮ್ಮ ಮೇಲೆ ಸಹಸ್ರಾರು ವರ್ಷಗಳು ಪರಕೀಯರ ಆಕ್ರಮಣ ನಡೆದರೂ ನಮ್ಮ ಅಂತರ್ಯದಲ್ಲಿ ಬೆಸೆದು ಹೋಗಿರುವ ನಮ್ಮ ಸಂಸ್ಕೃತಿಯನ್ನು ಯಾರಿಗೂ ನಾಷಮಾಡಲಾಗಲಿಲ್ಲ. ನಮ್ಮ ಮೇಲಿನ ದಾಳಿ ಕ್ರಿ.ಪೂ.೩೨೭ ರಲ್ಲೇ ಅಲೆಗ್ಸಾಂಡರಿನಿಂದಲೇ ಆರಂಭವಾಗಿದೆ. ಆದರೆ ಅವನ ಸೈನ್ಯವನ್ನು ನಮ್ಮ ದೇಶದ ಚಂದ್ರಗುಪ್ತ ಚಾಣಕ್ಯರು ೬-೭ ವರ್ಷಗಳ ಸತತ ಹೋರಾಟದಿಂದ ಹೊಡೆದಟ್ಟಿದರು. ಕ್ರಿ.ಶ. ಒಂದನೆಯ ಶತಮಾನದಲ್ಲಿ ಮಧ್ಯ ಏಶ್ಯಾದಿಂದ ಬಂದ ಹೂಣರು, ಶಕರೊಡನೆ ಇಲ್ಲಿನ ವಿಕ್ರಮಾದಿತ್ಯ, ಶಾಲಿವಾಹನರು ಹೋರಾಡಿದರು ಹೂಣರು, ಶಕರು ನಮ್ಮ ಸಂಸ್ಕೃತಿಯಲ್ಲಿ ಬೆರೆತು ಹೋದರು. ಆದರೆ ಕ್ರಿ.ಶ. ೭ ನೇ ಶತಮಾನದ ಪ್ರಾರಂಭದಲ್ಲಿ ಘಸ್ನಿ ಮಹಮದನಿಂದ ಶುರುವಾದ ಆಕ್ರಮಣ, ಮೊಗಲರು, ತುರ್ಕರು, ಪಾರಸಿಯರು ಮುಂತಾದವರಿಂದ ಸತತ ಒಂದು ಸಹಸ್ರ ವರ್ಷಗಳು ನಮ್ಮ ಮೇಲೆ ಧಾಳಿ ನಡೆಯಿತು. ಆಗೆಲ್ಲಾ ರಾಜಾಸ್ಥಾನದ ಮಹಾರಾಣಾ ಕುಂಭ, ರಾಣಪ್ರತಾಪಸಿಂಹ, ದಕ್ಷಿಣದಲ್ಲಿ ವಿಜಯನಗರದ ವಿದ್ಯಾರಣ್ಯರಿಂದ ಕೃಷ್ಣದೇವರಾಯನವರಗೆ, ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ, ಪಂಜಾಬಿನಲ್ಲಿ ಗುರುಗೋವಿಂದಸಿಂಹ, ಬಂದಾಬೈರಾಗಿ ಇವರೆಲ್ಲರ ಸತತ ಹೋರಾಟದ ಪ್ರಭಾವವು ಹೇಗಿತ್ತೆಂದರೆ ಮೊಹಮದ್ ಇಕ್ಬಾಲ್ ಹೇಳುತ್ತಾನೆ -"ಇಸ್ಲಾಮ್ ನೌಕೆಯು ಸಪ್ತ ಸಮುದ್ರವನ್ನು ದಾಟಿಬಂದರೂ ಈ ವಿಜಯಯಾತ್ರೆ ಭಾರತದ ಗಂಗೆಯ ಪ್ರವಾಹದಲ್ಲಿ ಮುಳುಗಿಹೋಯಿತು"ಆದರೂ ಆ ಸಮಯದಲ್ಲಿ ನಮ್ಮ ದೇಶದಲ್ಲಿ ದಾಳಿಕೊರರಿಂದ ಸ್ತ್ರೀಯರ ಮೇಲೆ ನಡೆದ ಅತ್ಯಾಚಾರ! ನಮ್ಮ ಸಂಪತ್ತಿನ ಲೂಟಿ !! ಅಬ್ಭಾ, ದಾಳಿಕೋರರ ಉಪಟಳ! ಮತಾಂತತರದ ಪರಾಕಾಷ್ಠೆ!! ಆನಂತರದ ದಾಳಿ ಬ್ರಿಟಿಷರದು. ಹದಿನೆಂಟನೆಯ ಶತಮಾನದ ಆದಿಯಲ್ಲಿ ತಕ್ಕಡಿ ಹಿಡಿದು ಕಾಲಿಟ್ಟ ಬ್ರಿಟಿಷರು ಕೊನೆಗೆ ಎರಡು ಶತಮಾನಗಳು ನಮ್ಮನ್ನಾಳಿದರು.ಆದರೆ ಆಗ ನಾವು ಸಾಂಸ್ಕೃತಿಕವಾಗಿ ಎಷ್ಟು ಸಮೃದ್ಧವಾಗಿದ್ದೆವೆಂದರೆ ೧೮೩೫ ರ ಫೆಬ್ರವರಿ ೨ ರಂದು ಲಾರ್ಡ್ ಮೆಕಾಲೆಯು ಬ್ರಿಟಿಶ್ ಪಾರ್ಲಿಮೆಂಟಿನಲ್ಲಿ ಮಾಡಿದ ಭಾಷಣ ವನ್ನು ಗಮನಿಸಬೇಕು-" ನಾನು ಭಾರತದ ಉದ್ದಗಲಕ್ಕೂ ಪ್ರವಾಸ ಮಾಡಿದ್ದೇನೆ, ನಾನುಒಬ್ಬ ಬಿಕ್ಷುಕನನ್ನು ನೋಡಲಿಲ್ಲ, ಒಬ್ಬ ಕಳ್ಳನನ್ನು ನೋಡಲಿಲ್ಲ,. ಭಾರತವು ಸಂಪದ್ಭರಿತವಾಗಿದೆ. ಭಾರತೀಯರನೈತಿಕತೆಯು ಅತ್ಯಂತ ಶ್ರೇಷ್ಠವಾದ ಮಟ್ಟದ್ದು, ಆದ್ದರಿಂದ ಭಾರತೀಯರ ನೈತಿಕ ಶಕ್ತಿಗೆ ಬೆನ್ನೆಲುಬಾಗಿರುವುದುಭಾರತದ ಅಂತ: ಶಕ್ತಿ, ಅಲ್ಲಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಪರಂಪರೆ. ಈ ಅಂತ:ಶಕ್ತಿಯನ್ನು ನಮ್ಮ ಆಂಗ್ಲಶಿಕ್ಷಣದಿಂದ ನಾಶ ಪಡಿಸಿ ಇಂಗ್ಳೀಶ್ ಶಿಕ್ಷಣದ ವ್ಯಾಮೋಹವನ್ನು ಎಷ್ಟರ ಮಟ್ಟಿಗೆ ಬೆಳೆಸ ಬೇಕೆಂದರೆ ಭಾರತದಸಂಸ್ಕೃತಿಯ ಬಗ್ಗೆ ಅಲ್ಲಿನ ಪರಂಪರೆಯ ಬಗ್ಗೆ ಅವರಿಗೆ ತಿರಸ್ಕಾರ ಬರಬೇಕು, ಆಗಮಾತ್ರ ನಾವು ಆಳಲು ಅವರನ್ನುಸಾಧ್ಯ." ಬ್ರಿಟಿಶರು ಈ ಒಂದು ಪ್ರಯತ್ನದಲ್ಲಿ ಎಷ್ಟು ಸಫಲರಾದರೆಂದರೆ ಅವರ ಶಿಕ್ಷಣದ ಮೂಲಕ ಒಂದು ಬುದ್ಧಿವಂತವರ್ಗವನ್ನು ಇಲ್ಲಿಯೇ ಸೃಷ್ಟಿಸಿ, ಅವರ ಮೂಲಕವೇ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುವ, ಪಾಷ್ಚಿಮಾತ್ಯ ಸಂಸ್ಕೃತಿಯೆಂದರೆ ಶ್ರೇಷ್ಠವೆಂದು ಭ್ರಮಿಸುವಂತೆ ಮಾಡಿ, ಕೊನೆಗೆ ಯಾವ ಹಂತವನ್ನು ನಾವು ತಲುಪಿದೆ ವೆಂದರೆ ಮೆಕಾಲೆ ಹೇಳಿದಂತೆ " ಚರ್ಮ ಮಾತ್ರ ಭಾರತೀಯರದಾಗಿರಬೇಕು, ಆದರೆ ಒಳಗೆಲ್ಲಾ ಇಂಗ್ಳೀಶ್ ಮಯವಾಗಿಬಿಡಬೇಕು,". ಈಗಲೂ ಮೆಕಲೆ ಅನುಯಾಯಿಗಳು ಮಾಡುತ್ತಿರುವ ಕೆಲಸ ಇದನ್ನೇ..... ಆದರೆ ಭಾರತಮಾತೆ ಬಂಜೆಯಲ್ಲ.ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ ಜಾಗೃತಿಯ ಪರ್ವ ಆರಂಭವಾಯ್ತು. ಪಂಜಾಬಿನಲ್ಲಿ ದಯನಂದ ಸರಸ್ವತಿಯವರ ಆರ್ಯಸಮಾಜ, ರಾಮಕೃಷ್ಣಪರಮಹಂಸರು, ಸ್ವಾಮಿ ರಾಮತೀರ್ಥರು, ರಮಣ ಮಹರ್ಷಿಗಳು, ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕ ಜಾಗೃತಿಯನ್ನುಂಟುಮಾಡಿದರೆ, ಬಂಗಾಳದ ಬಂಕಿಮಚಂದ್ರ ಚಟರ್ಜಿ ವಂದೇ ಮಾತರಮ್ ಮೂಲಕ ರಾಷ್ಟ್ರ ಜಾಗೃತಿಯನ್ನುಂಟುಮಾಡಿದರು.ವಾಸುದೇವ ಬಲವಂತ ಫಡಕೆ, ವೀರಸಾವರ್ಕರ್, ಚಂದ್ರಶೇಖರ ಆಜಾದ್, ರಾಸ ಬಿಹಾರಿ ಬೋಸ್. ಲಾಲ್ -ಬಾಲ್ -ಪಾಲ್. ಅರವಿಂದ ಘೋಷ್ ,ಭಗತ್ ಸಿಂಗ್, ಮುಂತಾದವರ ಹೋರಾಟದ ಪರಿಣಾಮ ಮುಂದೆ ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ತಳಹದಿಯಾಯ್ತು. ಅಂತೂ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಹಿನ್ನೆಲೆಯನ್ನು ಗಮನಿಸಬೆಕು, ಅದು ಪುಕ್ಕಟೆ ಬರಲಿಲ್ಲ ಸಹಸ್ರಾರು ದೇಶಭಕ್ತರ ಬೆವರು-ನೆತ್ತರಿನ ಫಲ ನಮ್ಮ ದೇಶದ ಸ್ವಾತಂತ್ರ್ಯ. ಆದರೆ ಈಗ ನಡೆದಿರುವುದೇನು? ಗ್ರಾಮರಾಜ್ಯ-ರಾಮರಾಜ್ಯ ಬಯಸಿದ್ದ ಗಾಂಧೀಜಿಯವರ ಕನಸು ನನಸಾಯಿತೇ? ಅಂದು ನೆಹರು ಮಾಡಿದ ಒಂದು ತಪ್ಪಿನ ಘೋರ ಪರಿಣಾಮ ಎಷ್ಟು ಗೊತ್ತೇ? ನಮ್ಮ ಪರಂಪರೆ ನೆಲೆಸಿರುವುದು ಹಳ್ಳಿಗಳಲ್ಲಿ, ಎಂಬ ಸತ್ಯವನ್ನು ಮರೆತು ಯಂತ್ರಗಳಿಂದ ದೇಶದ ಪ್ರಗತಿಯಾಗುತ್ತದೆಂಬ ಭ್ರಮೆಯಲ್ಲಿ ಕೈಗಾರಿಕೆಗಳನ್ನು ಹುಟ್ಟುಹಾಕಿದ ಪರಿಣಾಮವಾಗಿ ಇಂದು ನಮ್ಮ ಪಾರಂಪರಿಕ ಕಸುಬುಗಳಾದ ಕುಂಬಾರಿಕೆ, ಬಡಗಿ ವೃತ್ತಿ, ಚಮ್ಮಾರಿಕೆ , ಮಡಿವಾಳಿಕೆ, ಮುಂತಾದ ಹಲವು ವೃತ್ತಿಗಳು ಕಣ್ಮರೆ ಯಾದವು. ಎಲ್ಲಕ್ಕೂ ಯಂತ್ರಗಳು. ದೊಡ್ದ ದೊಡ್ದ ಕೈಗಾರಿಕೆಗಳು. ಗುಡಿಕೈಗಾರಿಕೆಗಳು ಮಾಯವಾದವು. ನಮ್ಮ ಸಾಂಸ್ಕೃತಿಕ ನೆಲಗಟ್ಟನ್ನು ಸಂಪೂರ್ಣ ದಿಕ್ಕರಿಸಲಾಯ್ತು. ಕೃಷಿ ಕ್ಷೇತ್ರದಲ್ಲಂತೂ ನಮ್ಮ ಪಾರಂಪರಿಕ ಪದ್ದತಿಗಳನ್ನು ಬಿಟ್ಟು ಹೆಚ್ಚು ಹೆಚ್ಚು ಆಹಾರ ಉತ್ಪಾದನೆಯ ಹೆಸರಲ್ಲಿ ಭೂಮಿಗೆ ವಿಷವನ್ನು ಬಿತ್ತಲಾಯ್ತು. ನಾಡಹಸುಗಳು ಮಾಯವಾಗಿ ಹೆಚ್ಚು ಹಾಲು ಕೊಡುವ ವಿದೇಶೀ ತಳಿಗಳು ಕಾಣಿಸಿ ಕೊಂಡವು. ಭೂಮಿಯನ್ನು ಉಳಲು ಯಂತ್ರಗಳು ಬಂದವು. ಅದರಿಂದ ಆಹಾರದ ಮೇಲಾಗಿರುವ ದುಷ್ಪರಿಣಾಮಗಳು ಸರ್ವ ವೇದ್ಯ. ಅಂತೂ ಸ್ವಾತಂತ್ರ್ಯ ಬಂದು ಆರು ದಶಕಳಾಗಿದ್ದರೂ ನಮ್ಮ ತನದಲ್ಲಿ, ನಮ್ಮ ಪರಂಪರೆಯನ್ನು ಉಳಿಸಿಕೊಳ್ಳುವುದರಲ್ಲಿ ನಾವು ಸೋತಿದ್ದೇವೆ. ನಮ್ಮ ಪಾರಂಪರಿಕವಾದ ಯೋಗ, ವೇದ, ಸಂಗೀತ, ನೃತ್ಯ,ಕಲೆ, ಮುಂತಾದ ವಿದ್ಯೆಯನ್ನು ಕಲಿಯಲು ಪಾಶ್ಚಿಮಾತ್ಯರು ಹಾತೊರೆಯುತ್ತಿರುವಾಗ ನಮ್ಮದೇಶದಲ್ಲಿರುವ ಮೆಕಾಲೆ ಸಂಜಾತರು ಪ್ರಗತಿಯೆಂದರೆ ಪಾಶ್ಚಿಮಾತ್ಯ ದೇಶಗಳ ಕಡೆ ಬೆರಳು ತೋರಿಸುವುದನ್ನು ನಿಲ್ಲಿಸಿಯೇ ಇಲ್ಲ. ನಮ್ಮ ಮೇಲಿನ ಸಾಂಸ್ಕೃತಿಕ ಧಾಳಿ ಈಗಲೂ ಸಾಗಿದೆ. ಸಿನೆಮಾ, ದೂರದರ್ಶನ ಮಾಧ್ಯಮಗಳಲ್ಲಿ ನಮ್ಮ ಸಂಸ್ಕೃತಿಯನ್ನು ಹೀಗಳೆಯುವ ಕಾರ್ಯಕ್ರಮಗಳು, ಸ್ವೇಚ್ಛಾಚಾರದ ಕುಣಿತದ ದೃಶ್ಯಗಳು ಮನಬಂದಂತೆ ನಡೆಯುತ್ತಿದ್ದು ನಮ್ಮ ಯುವ ಪೀಳಿಗೆಯಮೇಲೆ ಅತ್ಯಂತ ಅನಾರೋಗ್ಯಕರ ಪರಿಣಾಮ ಬೀರಿದೆ. ಸಮಾಜದ ಹಾಗೂ ವ್ಯಕ್ತಿಯ ಆರೋಗ್ಯ ಕೆಡುತ್ತಲೇ ಇದೆ. ನಾವು ಇಂದೂ ಯಾವುದೋ ಭ್ರಮಾ ಲೋಕದಲ್ಲಿಯೇ ವಿಹರಿಸುತ್ತಿದ್ದೇವೆ. ಸಂಕ್ರಾಂತಿ ಬಂದಿದೆ. ಸೂರ್ಯನೇನೋ ದಕ್ಷಿಣದಿಂದ ಉತ್ತರಕ್ಕೆ ಚಲಿಸುತ್ತ ಭೊಮಿಗೆ ಹಗಲು ಹೆಚ್ಚು ಮಾಡುತ್ತಾನೆ. ಕತ್ತಲೆ ಕಡಿಮೆಯಾಗಿ ಬೆಳಕು ಹೆಚ್ಚುತ್ತಾ ಹೋಗುವ ಈ ಸಂಕ್ರಮಣ ಕಾಲದಲ್ಲಿ ನಮ್ಮೊಳಗಿನ ಆರಿವಿನ ಬೆಳಕು ಪ್ರಜ್ವಲಿಸಬೇಕು. ದೇಶವು ಸತ್ಯಪಥದಲ್ಲಿ ಸಾಗುತ್ತಾ ಮತ್ತೊಮ್ಮೆ ನಮ್ಮ ಸಂಸ್ಕೃತಿ ಪರಂಪರೆಗಳಿಂದ ವಿಶ್ವದ ಮುಂದೆ ಪ್ರಜ್ವಲಿಸುತ್ತಾ ತಲೆ ಎತ್ತಿ ನಿಲ್ಲುವಂತಾಗಲೆಂಬುದು ಭಗವಂತನಲ್ಲಿ ನನ್ನ ಪ್ರಾರ್ಥನೆ. ನನ್ನ ಮಿತ್ರರಿಗೂ ಸಂಕ್ರಾಂತಿಯ ಶುಭಾಷಯಗಳು.

1 comment:

Third eye said...

Sreedhar,

Good one.I have a question : how do u say that parsees made attack on our land?Is there any record, I am interested to know more on this.please guide me.

Harisha