Tuesday, November 11, 2008

ಬ್ರಾಹ್ಮಣನಾಗಲು

ಅವರಿವರು ಅಂದರು
ನಾನು ಬ್ರಾಹ್ಮಣನೆಂದು
ನನಗರಿವಿತ್ತು ಅಲ್ಲವೆಂದು
ನಿತ್ಯವೂ ಅದೇ ತುಡಿತ
ನಾನು ಬ್ರಾಹ್ಮಣನೇ?
ಅದೇ ಕೊಳಕು ಮಾತುಕತೆ
ಅದೇ ಕಾಡುಹರಟೆ
ಅದೇ ದುಶ್ಷ್ಚಿಂತೆ
ಅದೇ ದುಡಿತ
ಅದೇ ಭೋಗ
ಅದೇ ಜೀವನ ಜಂಜಾಟ
ಕೋಪ-ತಾಪ
ಮುನಿಸು-ಹೊಲಸು
ಹೊಡೆದಾಟ-ಬಡಿದಾಟ
ಎಲ್ಲವೂ ಶೂದ್ರಾತಿಶೂದ್ರ
ಯಾವುದರಲ್ಲೂ ಬ್ರಾಹ್ಮಣನಲ್ಲ

ಅಹುದು ಆಸೆಇದೆ...
ನಾನು ಬ್ರಾಹ್ಮಣನಾಗಬೇಕೆಂದು
ಸುಜ್ಞಾನವ ಪಡೆದು
ಸಚ್ಚಿಂತನೆಯ ಮಾಡುತ್ತಾ
ಅಬಲರ,ದೀನದಲಿತರ
ನೆಲಕಚ್ಚಿದವರ ಆತ್ಮಗಳಲಿ
ಪರಮಾತ್ಮನನು ಕಾಣುತ್ತಾ
ನನ್ನೊಳಗಿರುವ ಪರಮಾತ್ಮನನು ಹುಡುಕುತ್ತಾ
ಕಾಮ,ಕ್ರೋಧ,ಲೋಭ,ಮೋಹ,ಮದ,
ಮತ್ಸರವೆಂಬ ಅರಿಷಡ್ವರ್ಗಗಳಿಂದ
ದೂರ ಮಾಡೆಂದು
ಅವನ ಪಾದಗಳಲಿ ಕಣ್ಣೀರಿಡುತ್ತಾ,
ಧರ್ಮ,ಅರ್ಥ,ಕಾಮ, ಮೋಕ್ಷ
ಪುರುಷಾರ್ಥಗಳ ಅರ್ಥ ತಿಳಿಯುತ್ತಾ
ಧರ್ಮ-ಮೋಕ್ಷಗಳ ಚೌಕಟ್ಟಿನಲಿ
ಅರ್ಥಕಾಮಗಳ ಅನುಭವಿಸುವ ಬುದ್ಧಿಕೊಡೆಂದು
ಅವನಲ್ಲಿ ಬೇಡುತ್ತಾ
ನಾನಾಗಬಯಸುವೆ ಬ್ರಾಹ್ಮಣ,
ನರೇಂದ್ರ ವಿವೇಕಾನಂದ ನಾದಂತೆ
ಪುಟ್ಟಪ್ಪ ವಿಶ್ವ ಮಾನವ ನಾದಂತೆ