Friday, November 7, 2008

ಏನಂತೀರಾ?-೩

ಇತ್ತೀಚಿಗೆ ದೇಶದೆಲ್ಲೆಡೆ ಧರ್ಮದ ಹೆಸರಲ್ಲಿ ತುಂಬಾ ಚರ್ಚೆಗಳು ನಡೆಯುತ್ತಿದೆ. ಕ್ರೈಸ್ತ ಮತಕ್ಕೆ ಮತಾಂತರದ ವಿಚಾರದಲ್ಲಿ ಆರಂಭವಾದ ಚರ್ಚೆ, ಇದೀಗ ನಾನೆಷ್ಟು ಕಟ್ಟರ್ ಹಿಂದು? ಅಥವಾ ನಾನೆಷ್ಟು ಹಿಂದು ವಿರೋಧಿ? ಎಂಬುದನ್ನು ಸಾಬೀತು ಪಡಿಸಿಕೊಳ್ಳಲು ಹೊರಟಂತೆ ಚರ್ಚೆಯ ದಾಟಿ ಸಾಗಿದೆ. ಇದೆಲ್ಲಾ ಓದುವುದಕ್ಕೂ ಬೇಸರ ಹುಟ್ಟಿಸುತ್ತೆ.ನಿಜವಾಗಿ ಯಾರಿಗೂ ದೇಶ-ಸಮಾಜ ಬೇಡವಾಗಿದೆ.ದೇಶದೆಲ್ಲೆಡೆ ನಿರಂತರವಾಗಿ ಬಾಂಬ್ ಸಿಡಿಯುತ್ತಿರುವಾಗ, ಬಾಂಬ್ ಹಾಕಿದವನ ಮತ-ಜಾತಿ ನಮಗೇಕೆ ಬೇಕು? ಸಧ್ಯ ಬಾಂಬ್ ಹಾಕಿದ ವ್ಯಕ್ತಿಯನ್ನು ಹಿಡಿದು ಗಲ್ಲಿಗೇರಿಸಬೇಕಷ್ಟೆ. ಆದರೆ ಆಗುತ್ತಿರುವುದೇನು? ಸಮಾಜದ ಸ್ವಾಸ್ಥ್ಯ ಕೆಡಸುವ ಚರ್ಚೆಗಳು. ಹಿಂದು ಧರ್ಮದಲ್ಲಿ ಬೇಕಾದಷ್ಟು ಹುಳುಕಿತ್ತು, ಎಂದು ದೊಡ್ಡಪಟ್ಟಿ ಮಾಡುವವರು ಕೆಲವರಾದರೆ, ವೈದಿಕ ಪರಂಪರೆಯ ಶ್ರೇಷ್ಠತೆಯ ಬಗ್ಗೆ ಉದ್ದುದ್ದ ಲೇಖನಗಳನ್ನು ಬರೆಯುವವರು ಕೆಲವರು.ಒಟ್ಟಿನಲ್ಲಿ ಪರ-ವಿರೋಧದ ಎರಡು ಗುಂಪು. ಎರಡೂ ಗುಂಪುಗಳಿಗೂ ಸಮಾಜದ ಸ್ವಾಸ್ಥ್ಯ ಕೆಡುತ್ತಿರುವ ಬಗ್ಗೆ ಕಳಕಳಿ ಇದೆಯೇ?. ಸಂಪದದ ಓದುಗರಾದರೂ ಒಂದಿಷ್ಟು ಸಮಾಜದ ಸ್ವಾಸ್ಥ್ಯ ಕಾಪಾಡುವ ಬಗ್ಗೆ ನಾಲ್ಕು ಮಾತು ಬರೆಯ ಬಾರದೆ?ಇಲ್ಲಿ ನನ್ನ ಒಂದೆರಡು ಮಾತುಗಳನ್ನು ಓದಿದ ನಂತರ ಈ ಬಗ್ಗೆ ಹೆಚ್ಚು ತಿಳಿದವರು, ಇನ್ನೂ ಹೆಚ್ಚು ಕಾಳಜಿ ಇರುವವರು ಅವರವರ ಅನಿಸಿಕೆ ಬರೆದರೆ ಒಳ್ಳೆಯದೆಂದು ನನ್ನ ಭಾವನೆ. ೧] ಹಿಂದು ಸಮಾಜದಲ್ಲಿದ್ದ ತಾರತಮ್ಯವನ್ನು ನನ್ನ ಐವತ್ತು ವರ್ಷಗಳ ಜೀವನದಲ್ಲಿ ಚೆನ್ನಾಗಿ ಕಂಡಿದ್ದೇನೆ, ಅನುಭವಿಸಿದ್ದೇನೆ. ಅದು ಹರಿಜನರ ಮೇಲಿನ ದಬ್ಬಾಳಿಕೆಗೂ ಅನ್ವಯ, ಬಡ ಬ್ರಾಹ್ಮಣನಿಗೂ ಅನ್ವಯ[ಬಡಬ್ರಾಹ್ಮಣರ ಮೇಲೆ ಶ್ರೀಮಂತ ಬ್ರಾಹ್ಮಣರ ದಬ್ಬಾಳಿಕೆ]
೨] ಅದು ಗತ ಇತಿಹಾಸ, ಈಗ ತಾರತಮ್ಯ ನನ್ನ ಅಂದಾಜಿನಂತೆ ನೂರರಿಂದ ಹತ್ತಕ್ಕೆ ಇಳಿದಿರಬಹುದು. ಹರಿಜನ ಬಂಧುಗಳಲ್ಲೂ ತುಂಬಾವಿದ್ಯಾವಂತರಿದ್ದು ಸಾಮಾಜಿಕವಾಗಿ ಒಂದು ಉನ್ನತ ಸ್ಥಾನವನ್ನು ಗಳಿಸುತ್ತಿರುವುದನ್ನು ಗಮನಿಸ ಬಹುದು, ಇದು ಸಮಾಜದ ಹಿತದೃಷ್ಟಿಯಿಂದ ಒಂದು ಒಳ್ಳೆಯ ಬೆಳವಣಿಗೆ. ವಿದ್ಯೆ ಯಾವ ಜಾತಿಯ ಆಸ್ತಿಯೂ ಅಲ್ಲ.
೩] ಹಿಂದೆ ಮೇಲ್ವರ್ಗದವರು ಕೆಳವರ್ಗದ ಜನರನ್ನು ನೋಯಿಸಿದ ಪರಿಣಾಮವಾಗಿ ಇಂದು ಮೇಲ್ಜಾತಿಯಲ್ಲಿ ಹುಟ್ಟಿದ ಕಡುಬಡವ ಕೂಡ ಅದರ ಪರಿಣಾಮ ಎದಿರುಸುತ್ತಿದ್ದಾನೆ. ಇದು ಸುಳ್ಳೆ?
೪] ಸಮಾಜವು ಒಂದು ಉತ್ತಮ ಸ್ಥಿತಿಗೆ ಬರುತ್ತಿರುವಾಗ ಹಿಂದು ಧರ್ಮದಲ್ಲಿ ಯಾವುದೋ ಕಾಲದಲ್ಲಿ ಇಂತಾ ತಾರತಮ್ಯಗಳಿತ್ತು- ಎಂದು ಈಗ ಪಟ್ಟಿಮಾಡಿ ಹಿಂದು ಧರ್ಮದಿಂದಲೇ ಕೆಲವರನ್ನು ದೂರಮಾಡುವ ಪ್ರಯತ್ನ ಸರಿಯೇ? ೫] ಇಡೀ ವಿಶ್ವಕ್ಕೆ ನಮ್ಮ ಪೂರ್ವಜರು ತಮ್ಮ ಉತ್ತಮ ಸಂಸ್ಕೃತಿಯಿಂದ ಆದರ್ಶ ವಾಗಿದ್ದುದು ಸುಳ್ಳೆ?
೬] ಕೊನೆಯದಾಗಿ ಎರಡು ಶ್ಲೋಕಗಳು:
ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯಾ: ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದು:ಖ ಭಾಗ್ಭವೇತ್
ಕಾಲೇ ವರ್ಷತು ಪರ್ಜನ್ಯ: ಪೃಥಿವೀ ಸಸ್ಯ ಶಾಲಿನೀ ದೇಶೋಯಂ ಕ್ಷೋಭ ರಹಿತ: ಸಜ್ಜನಾ ಸಂತು ನಿರ್ಭಯಾ:
ಮೇಲಿನೆರಡು ಶ್ಲೋಕಗಳು ಏನು ಹೇಳುತ್ತವೆ? ನಮ್ಮ ಪೂರ್ವಿಕರು ಸ್ವಾರ್ಥಿಗಳಾಗಿದ್ದರೋ? ಅಥವಾ ಅವರ ಕಣ್ಣಿನ ಮುಂದೆ ಇಡೀ ವಿಶ್ವವಿತ್ತೋ? ತಿಳಿದವರು ಹೇಳಿ