Wednesday, November 5, 2008

ವೈಕುಂಠ ಸಮಾರಾಧನೆ-ಒಂದು ನೆನಪು

ಬಂಧು ಒಬ್ಬರ ಮನೆಯಲ್ಲಿ ಅವರ ತಂದೆಯ ವೈಕುಂಠ ಸಮಾರಾಧನೆ.ಸಾಕಷ್ಟು ಜನ ಬಂದು ಊಟಮಾಡಿ ಆರಮವಾಗಿ ಹರಟೆ ಹೊಡೆಯುತ್ತಾ ಮನೆಮುಂದೆ ಕುಳಿತಿದ್ದಾರೆ.ಒಬ್ಬ ಹುಡುಗ ಬಿಕ್ಷೆ ಬೇಡಲು ಬಂದಿದ್ದಾನೆ. ಅವನನ್ನು ನೋಡಿದರೆ ನಿತ್ಯ ಅವನದು ಅದೇ ಕಾಯಕವಲ್ಲ ಎಂದು ಗೊತ್ತಾಗುತ್ತೆ. ಎಲ್ಲೋ ಕೂಲಿ ಕೆಲಸಕ್ಕೆ ಬಂದಿದ್ದವನು ಅಂದು ಕೆಲಸ ಸಿಕ್ಕಿಲ್ಲ, ಹಾಗೆಯೇ ಎಲ್ಲಾದರೂ ಚಿರಂಡಿ ಕ್ಲೀನ್ ಮಾಡುವ ಕೆಲಸ ಸಿಗುತ್ತೇನೋ ಅಂತಾ ಅಡ್ಡಾಡುತ್ತಿದ್ದಾನೆ. ಮದ್ಯಾಹ್ನದ ಸಮಯ, ಅವನ ಹೊಟ್ಟೆಯೂ ಚುರುಗುಟ್ಟಿದೆ.ಈ ಮನೆಮುಂದೆ ಜನ ಆರಾಮ ವಾಗಿ ಊಟ ಹೊಡೆದು ಎಲೆಅಡಿಕೆ ಜಗಿಯುತ್ತಿದ್ದುದನ್ನು ಕಂಡ ಹುಡುಗ ತನಗೂ ಏನಾದರೂ ಹೊಟ್ಟೆಗೆ ಸಿಗಬಹುದು ಎಂದುಕೊಂಡು " ಏನಾದರೂ ಸ್ವಲ್ಪ ತಿನ್ನೋದಕ್ಕೆ ಕೊಡಿ ಸ್ವಾಮಿ" ಎಂದು ಬೇಡಿದ.ಅಲ್ಲಿದ್ದ ಒಬ್ಬ ಮಹಾಶಯ ಹೇಳಿದ-" ಸೀಳಿದರೆ ನಾಲ್ಕು ಜನಾ ಆಗುವ ಹಾಗಿದ್ದೀಯ, ಬಿಕ್ಷೆ ಬೇಡ್ತೀಯಲ್ಲಾ? ಮೈ ಬಗ್ಗಿಸಿ ಕೂಲಿ ಮಾಡಬಾರದೇ?
ಹುಡುಗಹೇಳಿದ-" ಕೂಲಿ ಮಾಡುಕ್ಕೇ ಬಂದಿದ್ದೀನಿ ಸ್ವಾಮಿ, ಇವತ್ತು ಯಾಕೋ ಸರಿಯಾಗಿ ಕೂಲಿ ಸಿಕ್ಕಿಲ್ಲ"
ಇನ್ನೊಬ್ಬ ಮಹಾಶಯ ಹೇಳಿದ" ಏ ಹುಡುಗ, ಇಲ್ಲಿ ಬಿದ್ದಿರುವ ಎಲೆಗಳನ್ನೆಲ್ಲಾ ಆಯ್ದು ಆಲ್ಲಿ ತೊಟ್ಟಿ ಇದೆಯಲ್ಲಾ, ಅಲ್ಲಿಗೆ ಹಾಕು, ಏನಾದರೂ ತಿನ್ನೋದಕ್ಕೆ ಕೊಡ್ತೀವಿ".
ಪಾಪ, ಆಹುಡುಗ ಅಲ್ಲಿ ಬಿದ್ದಿದ್ದ ಊಟಮಾಡಿ ಬಿಸುಡಿದ್ದ ಎಲೆಗಳನ್ನೆಲ್ಲಾ ಆಯ್ದು ದೂರದಲ್ಲಿದ್ದ ಮುನಿಸಿಪಲಿಟಿ ತೊಟ್ಟಿಗೆ ಹಾಕಿ ವಾಪಸ್ ಬರುವಾಗ ಇವನಿಗೆ ಕೆಲಸ ಹೇಳಿ ತಿನ್ನೋದಕ್ಕೆ ಏನಾದರೂ ಕೊಡ್ತೀನಿ ಅಂತಾ ಹೇಳಿದ್ರಲ್ಲಾ, ಆ ಮಹಾಶಯ ಅಲ್ಲಿಂದ ನಾಪತ್ತೆ.ಮತ್ತೆ ಹುಡುಗನಿಗೆ ಅಲ್ಲಿದ್ದವರೆಲ್ಲಾ ತಲೆಗೊಂದು ಮಾತ ನಾಡಿದ್ದೇ!
ಎಂತಾ ಜನಾ ಅಲ್ವಾ? ಈ ನಾಟಕವನ್ನೆಲ್ಲಾ ನೋಡ್ತಿದ್ದ ನನಗೆ ಹೊಟ್ಟೆ ಉರಿದು ಬೆಂಕಿಯಾಯ್ತು, ಹೊಟ್ಟೆ ತುಂಬಿದ್ದ ಜನ ಆಡಿದ್ದ ಮಾತುಗಳಿಂದ ರೋಸಿ ಹೋಗುವಂತಾಯ್ತು. ಆಹುಡುಗನನ್ನು ಕರೆದು ನನ ಜೊತೆ ಊಟಕ್ಕೆ ಕೂರಿಸಿಕೊಂಡೆ. ಮಲಿನವಾದ ಬಟ್ಟೆ ಹಾಕಿದ್ದ ಈ ಹುಡುಗನನ್ನು ನೋಡಿ ಅಲ್ಲಿದ್ದವರಿಗೆಲ್ಲಾ ನನ್ನ ಬಗ್ಗೆ ಸಿಟ್ಟು. ಅಲ್ಲಿದ್ದವರ ಸ್ವಭಾವದಿಂದ ನಾನೂ ಕೆರಳಿದ್ದೆ. ಆಮನೆಯವರಿಗೆ ನನ್ನ ಸ್ವಭಾವವೂ ಗೊತ್ತಿತ್ತು. " ಈಹುಡುಗ ಯಾರು? ಅಂತಾ ಈ ನಟಕವನ್ನೆಲ್ಲಾ ನೋಡದಿದ್ದ ಹೊಸಬರು ಕೇಳಿದ್ದಕ್ಕೆ ನನ್ನ ಬಂಧು ಹೇಳಿದರು" ಇವ್ನು ನಮ್ಮ ಶ್ರೀಧರ್ ನೆಂಟ". -ಅವರ ಮಾತಿನಲ್ಲಿ ತಾತ್ಸಾರ ಇತ್ತು.
ನಾನು ಗಟ್ಟಿಯಾಗೇ ಹೇಳಿದೆ" ಹೌದು, ನಮ್ಮ ಮನೆ ಹುಡುಗ". [ನನ್ನ ಮನಸ್ಸು ಕುದ್ದು ಹೋಗಿತ್ತು]
ಊಟ ವಾದ ಮೇಲೆ ನನ್ನ ಬಂಧುವಿಗೆ ನಿಧಾನವಾಗಿಯೇ ಹೇಳಿದೆ" ನಿಜವಾಗಿ ಹಸಿದಿದ್ದು ಬಹಳ ಸಂತೋಷ ದಿಂದ ಊಟ ಮಾಡಿದವನು ನಮ್ಮ ಹುಡುಗನೇ. ನಿಮ್ಮಪ್ಪನ ವೈಕುಂಠ ಸಮಾರಾಧನೆ ಮಾಡ್ತಾ ಇದ್ದೀರಾ.... ನಿಮ್ಮಪ್ಪನ ಆತ್ಮವೇ ಎಲ್ಲಿ ಆ ಬಡಪಾಯಿ ಹುಡುಗನ ರೂಪದಲ್ಲಿ ಬಂದಿತ್ತೋ! ನೀವು ಕರೆದಿದ್ದ ಬ್ರಾಹ್ಮಣರೆಲ್ಲಾ ಉಂಡಿರುವ ಎಲೆ ನೋಡ್ರಿ,ಹೇಗೆ ಅನ್ನ ಚೆಲ್ಲಿದ್ದಾರೆ? ಈ ಹುಡುಗನ ಎಲೆ ನೋಡ್ರೀ, ಹೇಗೆ ಒಂದಗಳು ಅನ್ನ ಚೆಲ್ಲಿಲ್ಲಾ, ತ್ರೃಪ್ತಿಯಿಂದ ಊಟ ಮಾಡಿದವ ಈ ಹುಡುಗ ಮಾತ್ರ!ನಿಮ್ಮಪ್ಪನ ಆತ್ಮಕ್ಕೆ ಇವತ್ತು ಏನಾದರೂ ತೃಪ್ತಿ ಯಾಗಿದ್ದರೆ ಈ ಹುಡುಗನ ಊಟದಿಂದ ಮಾತ್ರ! ಅಷ್ಟೊಂದು ಜನ ಊಟ ಮಾಡಿದ್ರಲ್ಲಾ ಅದರಿಂದ ನಿಮಗೆ ಯಾವ ಪುಣ್ಯನೂ ಸಿಕ್ಕಿಲ್ಲ ಗೊತ್ತಾ?ನನ್ನ ಬಂಧುವಿಗೆ ಏನಾದರೂ ಅನ್ನಿಸಲಿ? ನಿಮಗೇನು ಅನ್ನಿಸಿತು?