Sunday, November 30, 2008

ಆಪತ್ತಿಗಾದವನೇ ನೆಂಟ

ಅಣ್ಣ-ತಮ್ಮ, ಅಕ್ಕ-ತಂಗಿ,ಬಂಧು-ಬಳಗ; ಈ ಸಂಬಂಧಗಳ ಬಗೆಗೆ ಸ್ವಲ್ಪ ಚಿಂತನ-ಮಂಥನ ನಡೆಸಬೇಕೆನಿಸಿದೆ. " ಆಪತ್ತಿಗಾದವನೇ ನೆಂಟ" ಎಂಬುದು ಎಷ್ಟು ಅನುಭವದ ನುಡಿ! ಗಾದೆಯಮಾತುಗಳು ನಮ್ಮ ಹಿರಿಯರ ಅನುಭವದ ನುಡಿಗಳೇ ಹೌದು. ಒಂದು ಕುಟುಂಬದಲ್ಲಿ ಹುಟ್ಟಿದ ನಾಲ್ಕು ಜನ ಮಕ್ಕಳಲ್ಲಿ ಎಷ್ಟೊಂದು ಭಿನ್ನತೆ ಕಾಣಬಹುದು-ಅಲ್ಲವೇ! ಒಬ್ಬನಿಗೆ ಹಣ ಕೂಡಿಡುವ ಸ್ವಭಾವ, ಮತ್ತೊಬ್ಬನಿಗೆ ಕೈಲಿದ್ದದ್ದೆಲ್ಲವನ್ನೂ ದಾನ ಮಾಡಿ ಸರಳ ಬದುಕು ನಡೆಸುವ ಸ್ವಭಾವ,ಮತ್ತೊಬ್ಬ ನಿಗೆ ದೇವರು,ಪೂಜೆ-ಪುನಸ್ಕಾರ ಗಳಲ್ಲಿಯೇ ಕಾಲ ಕಳೆಯುವ ಸ್ವಭಾವ.ಮತ್ತೊಬ್ಬ ಸೋಮಾರಿಯಾಗಿ ದೇಹಿ ಎನ್ನುತ್ತಲೇ ಬದುಕು ಸಾಗಿಸುವ ಸ್ವಭಾವ. ಅಬ್ಬಬ್ಭಾ! ಯಾರ ಸ್ವಭಾವವನ್ನೂ ಯಾರೂ ಬದಲಿಸಲು ಸಾಧ್ಯವಿಲ್ಲ. ಆದರೂ ಎಲ್ಲರೂ ಒಬ್ಬ ತಾಯಿಯ ಮಕ್ಕಳೇ. ಅಷ್ಟೇ ಅಲ್ಲ. ತಂದೆತಾಯಿಯ ಸ್ವಭಾವ ಮಕ್ಕಳಿಗಿರಬೇಕಿಲ್ಲ. ಪತಿ-ಪತ್ನಿಯರಲ್ಲೂ ವಿಭಿನ್ನ ಸ್ವಭಾವಗಳೇ ಇರಬಹುದು. ಜೊತೆಯಲ್ಲಿ ಮುವತ್ತು-ನಲವತ್ತು ವರ್ಷಗಳು ಸಂಸಾರ ಮಾಡಿದ ಮೇಲೂ ಇಬ್ಬರ ಸ್ವಭಾವ ಒಂದೇ ಆಗಲಾರದು. ಹೆಚ್ಚೆಂದರೆ ಅವರವರ ಸ್ವಭಾವ ಇಬ್ಬರಿಗೂ ತಿಳಿದಿದ್ದು ಅನುಸರಿಸಿ ನಡೆಯುವ ಸಾಧ್ಯತೆಗಳಿರಬಹುದು. ಅಥವಾ ಜೀವನ ಪರ್ಯಂತ ಉತ್ತರ-ದಕ್ಷಿಣ ದೃವಗಳಾಗೇ ಸಂಸಾರ ನೂಕ ಬಹುದು. ಇದೆಲ್ಲ ಪ್ರಸ್ತಾಪಿಸಲು ಕಾರಣ ಇಲ್ಲದಿಲ್ಲ. ನಮ್ಮ ಜೀವನದಲ್ಲಿ ನಿಜವಾದ ಬಂಧುಗಳು ಯಾರು? ಯಾರೊಡನೆ ಹೆಚ್ಚು ಬೆರೆಯಬೇಕು. ನಮ್ಮ ಸಂಬಂಧ ಯಾರೊಡನೆ ಹೆಚ್ಚು ನಿಕಟ ವಾಗಿರಬೇಕು? ಎನ್ನುವ ಮಾತು ಬಂದಾಗಲೆಲ್ಲಾ " ಏನಾದರೂ ಆಗಲೀ ಅಣ್ನ-ತಮ್ಮ ,ಅಕ್ಕ-ತಂಗಿ- ಹೀಗೆ ಬೆನ್ನಲ್ಲಿ ಬಿದ್ದವರ ಸಂಬಂಧ ಬಿಡ ಬಾರದೆಂಬುದು ವಾಡಿಕೆ. ಆದರೆ ನಿಜಸ್ಥಿತಿ ಏನು? ಈ ಕರುಳು ಸಂಬಂಧದಲ್ಲಿ ಆನಂದ ಪಟ್ಟವರೆಷ್ಟು? ದು:ಖ-ದುಮ್ಮಾನ ಅನುಭವಿಸಿದವರೆಷ್ಟು? ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡಬೇಕು, ಇವೆಲ್ಲದರ ಚಿಂತನ-ಮಂಥನ ನಡೆಯಬೇಕು, ಅಲ್ಲವೇ?
ನಾನು ಅನೇಕ ಮನೆಗಳಲ್ಲಿ ಅಣ್ಣ ತಮ್ಮಂದಿರ ನಡುವೆ ದೊಡ್ದ ಬಿರುಕಿರುವುದನ್ನು ನೋಡಿದ್ದೇನೆ. ನನ್ನ ಒಬ್ಬ ಸ್ನೇಹಿತರಿದ್ದಾರೆ. ಬಹಳ ದೊಡ್ದ ವ್ಯಕ್ತಿ. ಅಣ್ಣ ತಮ್ಮಂದಿರುಗಳ ಹೆಸರನ್ನೂ ಕೂಡ ಅವರ ಬಾಯಲ್ಲಿ ಹೇಳುವುದಿಲ್ಲ. ಅಷ್ಟೊಂದು ತಾತ್ಸಾರ. ಏಕೆ ಹೀಗೆಂದು ನಾನು ಅವರಲ್ಲಿ ಕೇಳಿದ್ದುಂಟು. ಅವರ ಮಾತಲ್ಲೇ ಕೇಳಿ " ನನ್ನ ಬಗ್ಗೆ ತಮ್ಮಂದಿರಿಗೆಲ್ಲಾ ಹೊಟ್ಟೆ ಉರಿ. ನನ್ನಂತೆ ಕಷ್ಟ ಪಟ್ಟು ಸಂಪಾದಿಸುವ ಯೋಕ್ತಿ ಯಿಲ್ಲ. ಆದರೆ ನನ್ನ ಸಂಪಾದನೆಯ ಮೇಲೆ ಅವರ ಕಣ್ಣು.ಇವರು ಕುಳಿತಿದ್ದ ಜಾಗಕ್ಕೆ ಹಣ ಬಂದು ಬೀಳಬೇಕೆಂದು ಬಯಸುತ್ತಾರೆ. ಅಷ್ಟೇ ಅಲ್ಲ ನನ್ನ ಅಕ್ಕ ತಂಗಿಯರಿಗೆಲ್ಲಾ ನನ್ನ ಮೇಲೆ, ನನ್ನ ಪತ್ನಿಯ ಮೇಲೆ ಇಲ್ಲ ಸಲ್ಲದ ಚಾಡಿ ಹೇಳಿ ಎಲ್ಲರೂ ನನ್ನ ಹತ್ತಿರ ಮಾತು ಬಿಟ್ಟಿದ್ದಾರೆ. ಈಗ ನಾನೇನು ಮಾಡಬೇಕು? ಇವರ ಕಾಲಿಗೆ ಬೀಳ ಬೇಕೇನು?"ಯಾವ ಕುಟುಂಬದಲ್ಲಿ ಅಣ್ಣತಮ್ಮಂದಿರು,ಅಕ್ಕತಂಗಿಯರು ಪರಸ್ಪರ ಅರ್ಥಮಾದಿಕೊಂಡು ನೆಮ್ಮದಿಯಾಗಿ, ಸಾಮರಸ್ಯದಿಂದ ಬದುಕುತ್ತಿದ್ದಾರೆ?
ಅಣ್ಣತಮ್ಮಂದಿರು,ಅಕ್ಕತಂಗಿಯರಿಂದ ನೋವು ಅನುಭವಿಸಿದವರೇ ಹೆಚ್ಚು. ಅಷ್ಟೇ ಅಲ್ಲ. ಸಾಮಾನ್ಯವಾಗಿ ಬಲಹೀನ ನಾಗಿದ್ದವನಿಗೆ ವಿಧೇಯತೆ ಹೆಚ್ಚು ಇರಬೇಕು. ಆಗ ಸಮರ್ಥರಾದವರ ಕರುಣೆಗೆ ಪಾತ್ರರಾಗ ಬಹುದು.ಅನ್ಯೋನ್ಯತೆಯಿಂದ ಕಷ್ಟ ಸುಖಗಳನ್ನು ಹಂಚಿಕೊಳ್ಳ ಬಹುದು, ಆದರೆ ಇದ್ದವನು ಇಲ್ಲದವನಿಗೆ ಮಾಡಬೇಕಾದುದು ಅವನ ಕರ್ತವ್ಯವಾದ್ದರಿಂದ ಅವನು ಮಾಡಲಿ-ಎಂದು ಅಪೇಕ್ಷಿಸುವುದು ಎಷ್ಟು ಸೂಕ್ತ? ನಿಶ್ಕಲ್ಮಷ ಪ್ರೀತಿಯು ಮಾತ್ರ ಪರಸ್ಪರ ಚಿಂತಿಸುವಂತೆ ಮಾಡಬಲ್ಲದು.ಮತ್ತೊಬ್ಬ ಸ್ನೇಹಿತನಿದ್ದಾನೆ. ತುಂಬಾ ಉದಾರಿ. ಸದ್ಗುಣವಂತ. ಅವನ ತಮ್ಮ ಪರಮ ಚಾಂಡಾಲ. ಮಾಹಾ ಜಿಪುಣ. ಬ್ಯಾಂಕ್ ನಲ್ಲಿ ಅವನ ಹಣ ಕೊಳೆಯುತ್ತಿದ್ದರೂ ಅತೀ ಬಡವನಂತೆ ಜೀವನ. ನನ್ನ ಮಿತ್ರನಿಗೆ ತನ್ನ ಒಡಹುಟ್ಟಿದವರಿಗಿಂತ ಕುಟುಂಬದ ಹೊರಗೆ ಸಮಾನ ಮಾನಸಿಕತೆಯ ಸ್ನೇಹಿತರು ದೊರೆತಾಗ ಸಹಜವಾಗಿ ಹೊರಗಿನವರ ಸಂಬಂಧ ಬೆಳೆಯಿತು. ಇದನ್ನು ನೋಡಿದ ಮನೆಯವರಿಗೆ ಸಿಟ್ಟು .
ಈ ತೆರನಾದ ಉದಾಹರಣೆಗಳಿಗೇನೂ ಕೊರತೆ ಯಿಲ್ಲ. ನೀವೇನಂತೀರಾ?

1 comment:

Harisha - ಹರೀಶ said...

ಕೆಲವರು ಎಲ್ಲವನ್ನೂ ಸಹಿಸಿ ಹೊಂದಿಕೊಂಡು ಹೋಗಿಬಿಡುತ್ತಾರೆ. ಅದು ಅವರ ದೊಡ್ಡ ಗುಣ. ಆದರೆ ಎಲ್ಲರೂ ಹಾಗೆ ಇರಬೇಕೆಂದು ಅಪೇಕ್ಷಿಸುವುದು ತಪ್ಪಾಗುತ್ತದೆ.