Saturday, September 27, 2008

ಗೌರತ್ತೆ

ಯಾಕೋ ಇವತ್ತು ನಮ್ಮ ಗೌರತ್ತೆ ನೆನಪು ತುಂಬಾ ಕಾಡ್ತಾ ಇದೆ. ಮನುಷ್ಯನ ಸ್ವಭಾವವೇ ಹಾಗೆ.ಮನೆಯಲ್ಲಿ ಮನೆಮಂದಿಯೆಲ್ಲಾ ಆರೋಗ್ಯವಾಗಿ ಸುಖವಾಗಿದ್ದಾಗ , ಕೈತುಂಬಾ ಕಾಸು ಓಡಾಡ್ತಾ ಇದ್ದಾಗ , ಯಾರ ನೆನಪೂ ಆಗುಲ್ಲಾ. ಅರೆ ನಾನು ಕಷ್ಟಪಟ್ಟು ಕೆಲಸ ಮಾಡ್ತೀನಿ, ಕೈತುಂಬಾ ದುಡೀತೀನಿ, ಯಾರ ಮುಲಾಜು ಏನು? ಸೋಮಾರಿಗಳಾದ್ರೆ ಅವರಿಗೆ ಬದುಕು ಕಷ್ಟ, ಕಷ್ಟ ಪಟ್ಟು ಕೆಲಸ ಮಾಡೋರು ಯಾಕೆ ಹೆದರಬೇಕು? ನಮ್ಮ ಮೂಗಿನ ನೇರಕ್ಕೆ ಎಷ್ಟೆಲ್ಲಾ ಮಾತನಾಡ್ತೀವಿ ರೀ. ಏನೋ ಆ ಭಗವಂತ ಎಲ್ಲವನ್ನೂ ಚೆನ್ನಾಗಿ ಕೊಟ್ಟಾಗ ಹೀಗೆ ನಾವು ಅವನನ್ನೂ ಮರೆತು ಮಾತನಾಡ್ತೀವಿ. ಆದರೆ ಒಂದು ಚಿಕ್ಕ ಕಷ್ಟ ಬಂತೂ ಅಂದ್ರೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಆಡ್ತೀವಿ. ಆಲ್ವಾ?
ಯಾಕೆ ಇಷ್ಟೆಲ್ಲಾ ಬರೀತಿದೀನಿ ಅಂದ್ರೆ , ಕಳೆದ ಎಂಟು ದಿನಗಳಿಂದ ನನಗೆ ವೈರಲ್ ಫೀವರ್, ನಿನ್ನೆಯಿಂದ ಹೆಂಡತಿ ಹಾಗೂ ಮಗ ಇಬ್ರಿಗೂ ಜ್ವರ ಶುರುವಾಗಿದೆ. ಎಲ್ಲರೂ ಒಟ್ಟಿಗೆ ಡಾಕ್ಟರ್ ಹತ್ತಿರ ಹೋಗಿ ಸೂಜಿ ಹಾಕಿಸಿಕೊಂಡು ಬಂದಿದ್ದಾಯ್ತು.ಮನೇಲಿ ಯಜಮಾನನಿಗೆ,ಮಕ್ಕಳಿಗೆ ಹುಷಾರು ತಪ್ಪಿದರೆ ಯಜಮಾಂತಿ ಎಲ್ಲರನ್ನೂ ಸುದಾರಿಸಿಬಿಡ್ತಾಳೆ. ಕಾಲಕಾಲಕ್ಕೆ ಹೊಟ್ಟೆಗೆ ಚೆನ್ನಾಗಿಯೇ ಆಗುತ್ತೆ.ಆದರೆ ಅದೇ ಯಜಮಾಂತಿಯೇ ಮಲಗಿಬಿಟ್ರೆ ದೇವರೇ ಗತಿ. ದೇವರೂ ಕಾಪಾಡುವುದಕ್ಕಾಗುಲ್ಲ. ಆಗಲೇ ಹೇಳಿದಂತೆ ಮನೇಲಿ ಎಲ್ಲರೂ ಹುಷಾರು ತಪ್ಪಿದ್ದೇವೆ. ಯಾರನ್ನು ಯಾರು ಸುದಾರಿಸಬೇಕು? ನನ್ನ ಮಕ್ಕಳಿಗೆ ಒಬ್ಬನಿಗೆ ೨೪ ವರ್ಷ, ಒಬ್ಬನಿಗೆ ೨೩ ವರ್ಷ. ದೊಡ್ಡೋನು ಬಿ.ಇ ಮಾಡಿ ಮೈಸೂರಲ್ಲಿ ಕೆಲಸದಲ್ಲಿದ್ದಾನೆ. ಚಿಕ್ಕೊನುದ್ದೂ ಬಿ.ಇ.ಆಗಿದೆ, ಎಂ.ಬಿ.ಎ ಮಾಡ್ತಾ ಇದ್ದಾನೆ. ಹುಷಾರು ಸ್ವಲ್ಪ ತಪ್ಪಿದರೆ ಸಾಕು ಇಬ್ಬರೂ ಎಳೆ ಮಕ್ಕಳಂತೆಯೇ; ಇವತ್ತು ಚಿಕ್ಕವನಿಗೆ ಹುಷಾರು ತಪ್ಪಿದ್ದರಿ೦ದಲೇ ನಮ್ಮ ಗೌರತ್ತೆ ನೆನಪಾದದ್ದು.ನನ್ನ ಮಗನಿಗೆ ಸ್ವಲ್ಪ ಜ್ವರ ತಲೆನೋವು ಬಂದರೆ ಸಾಕು ನನ್ನ ತೊಡೆ ಮೇಲೆ ಮಲಗಿ ಬಿಡ್ತಾನೆ. ಅವನಿಗೆ ನಿದ್ರೆ ಹತ್ತುವ ವರಗೂ ತಲೆ ಸವರುತ್ತಾ ಇರ್ಬೇಕು. ನನಗೂ ಹುಷಾರಿಲ್ಲ. ಇಂತಾ ಸ್ಥಿತಿಯಲ್ಲೂ ಮಗನಿಗೆ ಸುದಾರಿಸಲೇ ಬೇಕಲ್ಲಾ!!
ನಿಜವಾಗಲೂ ಇಂತಹ ಸಂದರ್ಭದಲ್ಲಿ ಎಲ್ಲಾ ಯೋಚನೆಗಳೂ ಬರುತ್ತೆ.
ನನ್ನ ಬಾಲ್ಯದ ನೆನಪು ಕಾಡುತ್ತೆ. .. . ...........
ನನ್ನ ಬಾಲ್ಯ.....ಅದೊಂದು ದೊಡ್ಡ ಅನುಭವ. ...ಕಿತ್ತು ತಿನ್ನುವ ಬಡತನ , ಒಂದೇ ಮಾತಲ್ಲಿ ಹೇಳಬೇಕೂ ಅಂದ್ರೆ ತುತ್ತು ಅನ್ನಕ್ಕೆ ಹಾಹಾಕಾರ. ಇಲ್ವೆ ಇಲ್ಲಾ ! ಆ ಕಾಲವೇ ಹಾಗೆ. ಅಂದರೆ ಸುಮಾರು ನಾಲ್ಕು ದಶಕಗಳ ಹಿಂದಿನ ಮಾತು. ಅವತ್ತಿನ ಬಡತನದ ಬಗೆಗೆ ಸಮಯ ಬಂದಾಗ ಬರೀತೀನಿ. ಆದರೆ ಈಗ ಕೇವಲ ನಮ್ಮ ಗೌರತ್ತೆ ಬಗ್ಗೆ ಮಾತ್ರ ನೆನಪು ಮಾಡಿಕೊಳ್ಳಬೇಕು, ಇವತ್ತಿಗೆ ಅಷ್ಟೆ ಸಾಕು.
ಗೌರತ್ತೆ ನಮ್ಮ ಅಪ್ಪನ ಅಕ್ಕ. ಅವಳ ಹತ್ತು ವರ್ಷಕ್ಕೆ ಅರಕಲಗೂಡು ಹತ್ತಿರ ಮಗ್ಗೆಗೆ ಕೊಟ್ಟು ಮದುವೆ ಯಾಗಿತ್ತ೦ತೆ. ಮದುವೆ ಯಾದ ಒ೦ದು ವರ್ಷದಲ್ಲಿ ಗಂಡ ಗೊಟಕ್. ಅವತ್ತಿನಿ೦ದ ಗೌರತ್ತೆ ನಮ್ಮ ಮನೆಯಲ್ಲೇ. ಮದುವೆ ಅ೦ದ್ರೆ ಏನು ಅ೦ತಾ ಗೊತ್ತಾಗುವುದಕ್ಕೆ ಮು೦ಚೆ ವಿಧವೆಯ ಪಟ್ಟ. ಅಬ್ಭಾ ಎಂತಾ ಅನ್ಯಾಯ? ಅವತ್ತಿನಿ೦ದ ಅವಳ ಸ್ವ೦ತ ಜೀವನ ಅ೦ದ್ರೆ ಏನು ಅ೦ತಾ ಅವಳಿಗೆ ಗೊತ್ತೇ ಇಲ್ಲ.ನಮ್ಮಪ್ಪನ ಮದುವೆ ಆಗಿ ನಾವೆಲ್ಲಾ ಹುಟ್ಟಿದಮೇಲೆ ನಮನ್ನು ನಮ್ಮಮ್ಮನಿಗಿ೦ತ ಚೆನ್ನಾಗಿ ಸಲಹಿದ್ದು ನಮ್ಮ ಗೌರತ್ತೆಯೇ. ನಮ್ಮ ಗೌರತ್ತೆ ಸಾಯುವ ವರೆಗೂ ನಮ್ಮ ಮನೆಯ ಮಕ್ಕಳೆಲ್ಲಾ ಬಾರೆ-ಹೋಗೆ ಅಂತಾನೆ ಅ೦ತಿದ್ದು. ಅವರಿಗೆ[ಅವಳಿಗೆ] ಅದೇ ಚೆನ್ನಾ.ನಮ್ಮ ಮನೆಯಲ್ಲಿ ಬಡತನವಿದ್ದರೂ ನಾಲ್ಕಾರು ದನಗಳು ಇದ್ದವು. ಹಾಗಾಗಿ ಕರಾವು ಇತ್ತು. ಅವತ್ತು ಊಟ ಮಾಡಿರಲಿ ಬಿಡಲೀ ಮಲಗುವಾಗ ಎಲ್ಲಾ ಮಕ್ಕಳಿಗೂ ನಮ್ಮ ಗೌರತ್ತೆ ಒಂದು ಬಟ್ಟಲು ಹಾಲು ಕುಡಿಸಿಯೇ ಮಲಗಿಸ್ತಾ ಇದ್ದಳು. ಒ೦ದುವೇಳೆ ನಿದ್ರೆ ಬಂದು ಮಲಗಿದ್ದರೂ ಎಬ್ಬಿಸಿ ಹಾಲು ಕುಡಿಸಿಯೇ ಮಲಗಿಸುತ್ತಿದ್ದಳು. ಸ್ವಲ್ಪಾ ತಲೆನೋವು ಅಂದ್ರೆ ಸಾಕು ತೊಡೆ ಮೇಲೆ ಮಲಗಿಸಿಕೊಂಡು ಹಿತವಾಗಿ ತಲೆ ನೇವರಿಸಿ ನಿದ್ರೆ ಮಾಡಿಸಿದಮೇಲೆ ನಮ್ಮಮ್ಮನನ್ನು ಕರೆದು " ನರಸಮ್ಮಾ, ಮಗುವನ್ನು ಹಾಸಿ ಮಲಗಿಸು, ನಿದ್ರೆ ಮಾಡಿದೆ ಅಂತಾ ಹೇಳಿ, ನಿದಾನವಾಗಿ ಹಾಸಿಗೆಯಲ್ಲಿ ಮಲಗಿಸುತ್ತಿದ್ದರು.[ಹಾಸಿಗೆ ಅ೦ದ್ರೆ ಹೇಗಿತ್ತು ಅನ್ನೋದಕ್ಕೆ ಒ೦ದು ಕಥೆ ಬರೀ ಬೇಕಾಗುತ್ತೆ , ಸಧ್ಯಕ್ಕೆ ಆರುಜನ ಮಕ್ಕಳು, ಅಮ್ಮ, ಅತ್ತೆ, ಅಜ್ಜಿ ಸೇರಿ ಒಂದು ಚಾಪೆಯ ಮೇಲೆ ಒ೦ದು ಹರಕಲು ಜಮಖಾನ.ಅಪ್ಪ ಮಾತ್ರ ಬೇರೆ ಮಲಗ್ತಾ ಇದ್ರು ] ಇನ್ನು ನಮ್ಮಪ್ಪನ ಬಗ್ಗೆ ಅವರಿಗಿದ್ದ ಪ್ರೀತಿ! ಅದನ್ನು ಅಳೆಯಲು ಸಾಧ್ಯವೇ ಇಲ್ಲ. ನಮ್ಮಪ್ಪ ಮಾತ್ರ ಅವರನ್ನು ಸಿಕ್ಕಾಪಟ್ಟೆ ಬೈತಿದ್ರು. ಆದರೆ ನಮ್ಮತ್ತೆ ಮಾತ್ರ ಅವಳ ತಮ್ಮನನ್ನು ಒ೦ದು ದಿನಾ ಬೈಲಿಲ್ಲ.ನಮ್ಮತ್ತೆ ಜೊತೆಗೆ ನಮ್ಮಜ್ಜಿ ,ನಮ್ಮ ದೊಡ್ಡಮ್ಮ ಎಲ್ಲಾ ಸೇರಿ ಐದುಜನ ದೊಡ್ಡೋರು ಮನೇಲಿದ್ರು. ಬಡತನ ಇದ್ದರೂ ಜೀವನಕ್ಕೆ ಸೆಕ್ಯೂರಿಟಿ ಹೇಗಿತ್ತು ಅಂದ್ರೆ ಮನೇಲಿ ಯಾರಿಗಾದರೂ ಹುಷಾರಿಲ್ಲ ಎಂದರೆ ಯೋಚಿಸಲೇ ಬೇಕಿರಲಿಲ್ಲ. ನೋಡೋದಕ್ಕೆ ಸದಾಕಾಲ ನಮ್ಮತ್ತೆ. ಇನ್ನೊಂದು ವಿಷಯ ಹೇಳಲೇ ಬೇಕು-ನಮ್ಮತ್ತೆಗೆ ಅವರು ಸಾಯೋ ವರಗೂ ಹುಶಾರೇ ತಪ್ಪಲಿಲ್ಲ. ಕಾರಣ ಗೊತ್ತೇ? ಅವರ ದೇಹದಬಗ್ಗೆ ಅವರಿಗೆ ಮಮಕಾರವೇ ಇರಲಿಲ್ಲ ವಲ್ಲ. ಅಧ್ಯಾತ್ಮದಲ್ಲಿ ಈ ದೇಹ ನಾನಲ್ಲ ಅಂತಾ ಹೇಳ್ತಾರೆ. ಆದ್ರೆ ಅಮ್ಮತ್ತೆಗೆ ಅಧ್ಯಾತ್ಮ ಅಂದ್ರೆ ಗೊತ್ತಿರಲಿಲ್ಲ. ಅವರಿಗೆ ಗೊತ್ತಿದ್ದ ವಿಷಯ ಅಂದ್ರೆ ಅವರ ತಮ್ಮನ ಮಕ್ಕಳು ಅಲ್ಲಲ್ಲ ಅವರ ಮಕ್ಕಳು ಸುಖವಾಗಿರಲಿ- ಎಂಬುದು ಅಷ್ಟೆ.
ಈಗ....ನಮ್ಮಪ್ಪ ಅಮ್ಮಾ , ನಮ್ಮತ್ತೆ ಕೂಡ ಇಲ್ಲ. ಹೋಗಿ ೮-೧೦ ವರ್ಷ ವಾಯ್ತು. ಜೀವನಕ್ಕೆ ಯೋಚನೆ ಇಲ್ಲ. ಆದರೆ ಗೌರತ್ತೆ ಅಂತಾ ತಾಯಿ ಇಲ್ಲದಿರುವ ಕೊರತೆ ನಿತ್ಯವೂ ಕಾಡುತ್ತೆ.
ಒಲೆಗೊ೦ದು ಒದೆಗೊರಡು ,ಮನೆಗೊ೦ದು ಮುದಿಗೊರದು ಇರಬೇಕೂ ಅಂತಾ ನಮ್ಮಮ್ಮ ಹೇಳ್ತಾ ಇದ್ದರು.
ಹರಿಹರಪುರಶ್ರೀಧರ್

2 comments:

ತೇಜಸ್ವಿನಿ ಹೆಗಡೆ said...

ನಮಸ್ಕಾರ ಸರ್.

ತುಂಬಾ ಇಷ್ಟವಾಯಿತು ನಿಮ್ಮ ಬ್ಲಾಗ್ ಹಾಗೂ ಅದರೊಳಗಿನ ಉತ್ತಮ ಚಿಂತನೆಗಳು. ಅದರಲ್ಲೂ ನಿಮ್ಮ ಗೌರತ್ತೆ ಪ್ರತಿ ನೀವು ಇಟ್ಟುಕೊಂಡಿರುವ ಗೌರವ, ಪ್ರೀತಿಯನ್ನು ಓದಿ ಮನದುಂಬಿ ಬಂತು. ಈ ನಿಮ್ಮ ಬರಹ ನನ್ನ ಕಥೆಯಾದ "ಹೆಗ್ನೂರತ್ತೆ" ಯನ್ನು ನೆನಪಿಸಿತು. ಈ ಕಥೆಯನ್ನು ನನ್ನ ಅಪ್ಪನ ಅಕ್ಕನ ಕುರಿತಾಗಿ ಬರೆದದ್ದು.

ಹರಿಹರಪುರ ಶ್ರೀಧರ್ said...

Thank u Thejasvini
Be in touch with my Blog.I too.