Sunday, May 17, 2009

ಜೆಂಟ್ಸ್ ಪಾರ್ಲರ್







ಅನೇಕ ದಿನಗಳಿಂದ ನನ್ನನ್ನು ಬಲು ಆಕರ್ಷಿಸಿದ್ದ ಇಬ್ಬರು ತರುಣರನ್ನು ಇಂದು ಮಾತನಾಡಿಸಲು ಅವಕಾಶವಾಯ್ತು.ಸದಾ ಹಸನ್ಮುಖಿಗಳಾಗಿರುವ ಈ ಇಬ್ಬರು ತರುಣರು ತಾವು ಮಾಡುವ ಕಾಯಕದಲ್ಲಿ ಕಿಂಚಿತ್ ಬೇಸರಿಸದೆ ಅದೆಷ್ಟು ಜನ ಗಿರಾಕಿಗಳು ಬಂದರೂ ಬಲು ತಾಳ್ಮೆಯಿಂದ " ಕೇವಲ ಎರಡು ಕಟಿಂಗ್ ಇದೆ ಸಾರ್ ಅರ್ಧ ಗಂಟೆಯಲ್ಲಿ ಮುಗಿಯುತ್ತೆ ಕುಳಿತುಕೊಳ್ಳಿ ಎಂದು ಸನಿಹದಲ್ಲಿರುವ ಬೆಂಚ್ ಕಡೆ ಕೈ ತೋರಿಸುತ್ತಾರೆ. ಅಲ್ಲಿ ಒಂದೆರಡು ದಿನಪತ್ರಿಕೆಗಳು. ಅವುಗಳಲ್ಲಿ ಕಣ್ಣಾಡಿಸುವ ಹೊತ್ತಿಗೆ ಆ ಗಿರಾಕಿಯ ಸರತಿ ಬಂದು ಬಿಡುತ್ತೆ. " ಮೀಡಿಯಮ್ ಆಗಿರಬೇಕಾ? ಶಾರ್ಟ್ ಆಗಿರಬೇಕಾ? ಅಥವಾ ಸೈಡ್ ಮಾತ್ರ ಡ್ರೆಸ್ ಮಾಡಲೇ? ಎಂದು ನಿಧಾನವಾಗಿ ಕೇಳುತ್ತಾ ತಮ್ಮ ಕಾಯಕ ಶುರು ಮಾಡುವ ಈ ಸೋದರರನ್ನು ನೋಡಿದ ಯಾವ ಗಿರಾಕಿಯೂ ರಶ್ ಇದೆ ಎಂದು ಬೇರೆ ಅಂಗಡಿಗೆ ಹೋಗುಲ್ಲಾ.

ನಾನು ಒಂದೆರಡು ಫೋಟೋ ತೆಗೆದುಕೊಳ್ಳಲು ಅನುಮತಿ ಕೇಳಿದಾಗಲೇ " ಬೇಡ ಸಾರ್, ನಮ್ಮ ವೃತ್ತಿಗೆ ತೊಂದರೆ ಯಾಗುತ್ತೆ, ಅಂತಾ ಭಾರೀ ಸಂಕೋಚ ಹಾಗೂ ಭಯಮಿಶ್ರಿತ ಧ್ವನಿಯಲ್ಲಿ ಆ ಯುವಕರು ಹೇಳುವಾಗ ನನಗೆ ಭಾರೀ ಮುಜಗರವೇ ಆಯ್ತು. ಅಯ್ಯೋ ನಾನು ಈ ಯುವಕರ ಶ್ರದ್ಧಾಪೂರ್ವಕ ಕಾಯಕವನ್ನು ಗಮನಿಸಿ ಪತ್ರಿಕೆಗೆ ಒಂದು ಲೇಖನ ಮಾಡೋಣ ಅಂದ್ರೆ ಇವರೊಡನೆ ಇಂಟರ್ ವ್ಯೂ ಮಾಡುವುದಾದರೂ ಹೇಗೆ? ಈ ಪುಣ್ಯಾತ್ಮರಾದರೋ ತಾವಾಯ್ತು ತಮ್ಮ ಕಾಯಕ ವಾಯ್ತು ಅಂತಾ ಇರುವ ಜನ. ಇವರನ್ನು ಮಾತನಾಡಿಸುವ ಪರಿ ಎಂತು ಅಂತ ತುಂಬಾ ತಲೆಕೆಡಸಿಕೊಂಡು ಕಡೆಗೂ ಸಾಹಸಮಾಡಿ ಅವರ ಹೆಸರು ಇತ್ಯಾದಿ ತಿಳಿದುಕೊಂಡೆ. ಮಹೇಶ್ ಮತ್ತು ಪ್ರಸನ್ನ ಎಂಬ ಈ ಸೋದರರಲ್ಲಿ ಮಹೇಶ್ ಪಿ.ಯು.ಸಿ.ವರಗೆ ಓದಿದ್ದಾರೆ. ಅವರ ತಮ್ಮ ಹೈಸ್ಕೂಲು ಮುಗಿಸಿ ಸುಮ್ಮನಾದನಂತೆ.ಅವರ ನೋವು ನಲಿವುಗಳನ್ನು ಅವರ ಮಾತುಗಳಲ್ಲೇ ಕೇಳಿ.

ನಾನು: ಮಹೇಶ್, ನೀವುಈ ವೃತ್ತಿಗೆ ಹೇಗೆ ಬಂದಿರಿ?

ಮಹೇಶ್: ನಮ್ಮ ತಂದೆ ಕೂಡಾ ಇದೇ ವೃತ್ತಿಯನ್ನು ನಮ್ಮ ಹಳ್ಳಿಯಲ್ಲಿ ಚಿಕ್ಕದಾಗಿ ಮಾಡುತ್ತಿದ್ದರು ಆದರೆ ನಾನು ಮೂಡಿಗೆರೆಗೆ ಹೋಗಿ ಒಂದು ಅಂಗಡಿಯಲ್ಲಿದ್ದು ಕಲಿತು ಬಂದು ಈಗ ಹತ್ತು ಹನ್ನೆರಡು ವರ್ಷ ಗಳಿಂದ ಸ್ವಂತ ಪಾರ್ಲರ್ ಹಾಕಿಕೊಂಡಿರುವೆ.

ನಾನು: ಎಲ್ಲಾ ವೃತ್ತಿಗಳಿಗೂ ಒಂದು ಟ್ರೈನಿಂಗ್ ಅಂತಾ ಇದೆ, ಆದರೆ ನಿಮ್ಮ ವೃತ್ತಿಗೆ ಆರೀತಿ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಅಂತಾ ಇಲ್ಲ. ನೀವು ಹೇಗೆ ಈ ವೃತ್ತಿಯನ್ನು ಕಲಿತಿರಿ?

ಮಹೇಶ್: ಟ್ರೈನಿಂಗ್ ಇಲ್ಲದೆ ಯಾವ ಕೆಲಸವೂ ಮಾಡಲು ಸಾಧ್ಯವಿಲ್ಲ. ಮೊದಲು ಆರುತಿಂಗಳಿನಿಂದ ಒಂದು ವರ್ಷದ ವರಗೆ ನಾವು ಮಾಡುವ ಕೆಲಸವನ್ನು ಕಲಿಯಬೇಕಾದವನು ಶ್ರದ್ಧೆಯಿಂದ ನೋಡಿಕೊಳ್ಳುತ್ತಾನೆ. ಆಗ ರೇಸರ್ ಹೇಗೆ ಹಿಡಿಯಬೇಕು, ಕತ್ತರಿ ಹೇಗೆ ಹಿಡಿಯಬೇಕು, ಯಾವ ಯಾವ ಪೊಸಿಶನ್ ನಲ್ಲಿ ಹೇಗೆ ಕಟ್ ಮಾಡಬೇಕು, ಅಂತೆಲ್ಲಾ ಹೇಳಿಕೊಡುತ್ತೇವೆ. ಯಾರಿಗೂ ಇದ್ದಕ್ಕಿದ್ದಂತೆ ಕಟ್ಟಿಂಗ್ ಮಾಡಲು ಸಾಧ್ಯವಿಲ್ಲ. ಕ್ರಮೇಣ ನೋಡಿ ನೋಡಿ, ಅವರಿಗೆ ಡೌಟ್ ಬಂದಿದ್ದನ್ನು ಕೇಳಿ ತಿಳಿದುಕೊಂಡು ಕೆಲಸ ಆರಂಭಿಸಬೇಕಾಗುತ್ತೆ.

ನಾನು: ನಿಮ್ಮ ವೃತ್ತಿಯಲ್ಲಿ ದುಡಿಮೆ ಚೆನ್ನಾಗಿದೆ ಅಲ್ವಾ?

ಮಹೇಶ್: ನೋಡೀ ಸಾರ್, ಕೆಲಸ ಗೊತ್ತಿದ್ದರೆ ಬಿಡುವಿಲ್ಲದೆ ದುಡೀ ಬಹುದು ,ಆದರೆ ರಾತ್ರಿ ಹೊತ್ತಿಗೆ ಎರಡು ಭುಜಗಳೂ ಬಿದ್ದು ಹೋಗಿರುತ್ತವೆ. ಪ್ರಾಯ ವಿದ್ದಾಗ,ಶರೀರದಲ್ಲಿ ತಾಕತ್ ಇದ್ದಾಗ ಒಂದಿಷ್ಟು ದುಡಿದು ಇಡಬೇಕಷ್ಟೆ. ನಮ್ಮ ಕೆಲಸವನ್ನು ತುಂಬಾ ವರ್ಷಗಳು ಮಾಡಲು ಸಾಧ್ಯವಿಲ್ಲ.

ಮಹೇಶ್ ಧ್ವನಿಯಲ್ಲಿ ನೋವಿತ್ತು. ನಿಜವಾಗಿ ಆಗ ನನಗನ್ನಿಸಿತು, ನಾನು ಆಪ್ರಶ್ನೆ ಕೇಳ ಬಾರದಿತ್ತೇನೋ ಎಂದು , ಕೇಳದೆ ಹೋಗಿದ್ದರೆ ಅವರ ನೋವು ನನಗರ್ಥ ವಾಗುತ್ತಿರಲಿಲ್ಲ. ಇಬ್ಬರು ಯುವಕರು ಸೇರಿ ದಿನಕ್ಕೆ ಒಂದುವರೆ ಯಿಂದ ಎರಡು ಸಾವಿರ ರೂಪಾಯಿ ದುಡಿಯ ಬಲ್ಲರು, ಆದರೆ ಈಗಿನ್ನೂ ಮೂವತ್ತು ವರ್ಷ ವಯಸ್ಸಿಗಿಂತ ಚಿಕ್ಕ ಪ್ರಾಯದ ಆ ಯುವಕರಿಗೆ ಇನ್ನು ಹತ್ತು ವರ್ಷ ದುಡಿಯಬಹುದೇನೋ ಆಮೇಲೇನು? ಎಂಬ ಆತಂಕ ಮನದಲ್ಲಿ ಕಾಡಿದೆ.

ಹೇರ್ ಕಟಿಂಗ್ ಅನ್ನೋ ವೃತ್ತಿಯನ್ನು ಬಹಳ ತಿರಸ್ಕಾರದಿಂದ ಮಾತನಾಡುವ ಜನರನ್ನು ನಾನು ನೋಡಿರುವೆ. ಆದರೆ ಒಂದು ಕ್ಷಣ ಯೋಚಿಸಿ " ನಿಮ್ಮ ಮುಖ ಮತ್ತು ನಿಮ್ಮ ಹೇರ್ ಸ್ಟೈಲ್ ನಿಮ್ಮ ರೂಪಕ್ಕೆ ಆಧಾರವಾಗಿವೆ". ತಿಂಗಳಿಗೋ ಎರಡು ತಿಂಗಳಿಗೋ ಒಮ್ಮೆ ಹೇರ್ ಕಟ್ಟಿಂಗ್ ಸೆಲೂನಿಗೆ ಹೋಗದ ಪುರುಷರು ವಿರಳ. ಮನೆಯಲ್ಲೇ ಶೇವ್ ಮಾಡುವ ಪುರುಷರೂ ಕೂಡ ಒಮ್ಮೊಮ್ಮೆ ಮೀಸೆ ಟ್ರಿಮ್ ಮಾಡುವಾಗ ಅದು ಸರಿ ಹೋಗದೆ ಮೀಸೆಯನ್ನೇ ತೆಗೆದು ಒಂದಿಷ್ಟು ದಿನ ಮುಖ ಮುಚ್ಚಿಕೊಂಡು ತಿರುಗುವ ಪರಿಸ್ಥಿತಿ ತಂದುಕೊಳ್ಳುವುದು ಸರ್ವೇ ಸಮಾನ್ಯ ಸಂಗತಿ. ಆದರೆ ಹೇರ್ ಕಟಿಂಗ್ ಸೆಲೂನಿನಲ್ಲಿ ಹಾಗಾಗದು. ಅಂದರೆ ದಿನ ನಿತ್ಯವೂ ಹತ್ತಿಪ್ಪತ್ತು ಜನರಿಗೆ ಹೇರ್ ಕಟ್ಟಿಂಗ್ ಮಾಡುವ ವ್ಯಕ್ತಿಗೆ ಅವನ ವೃತ್ತಿಯಲ್ಲಿ ಅದೆಷ್ಟು ಏಕಾಗ್ರತೆ ಇರಬೇಕು!? ಅವನ ಸೆಲೂನಿಗೆ ಬಂದ ಮೊದಲ ವ್ಯಕ್ತಿಗೆ ಕಟಿಂಗ್ ಮಾಡುವಾಗ ಇರುವ ಏಕಾಗ್ರತೆಯನ್ನು ಅವನ ಕೊನೆಯ ಗಿರಾಕಿಗೂ ಕಾಯ್ದು ಕೊಳ್ಳಬೇಕಲ್ಲಾ!!

ಟ್ರೈನಿಂಗ್ ಬಗ್ಗೆ ಪ್ರಸ್ತಾಪಿಸಿರುವೆ. ಬಹುಷ: ಈ ವೃತ್ತಿಗೂ ಟ್ರೈನಿಂಗ್ ಕೊಡಬಾರದೇಕೆ,ಒಂದು ಡಿಪ್ಲಮೋ ಮಾಡಬಾರದೇಕೆ, ಅಂತಾ ಸರ್ಕಾರ ಯೋಚಿಸಿದರೆ ಟ್ರೈನಿಂಗ್ ಹೇಗಿರಬಹುದೆಂದು ಮನದಲ್ಲೇ ಊಹಿಸಿದೆ, ನಗು ಬಂತು. ಒಂದು ಪುರುಷನ ಲೈಫ್ ಸೈಸ್ ಬೊಂಬೆ. ಅದನ್ನು ಕುರ್ಚಿ ಮೇಲೆ ಕೂರಿಸಬೇಕು, ಅದರ ತಲೆಯ ಕೂದಲನ್ನು ಡ್ರಾಯಿಂಗ್ ಪ್ರಕಾರ ಕಟ್ ಮಾಡಬೇಕು. ಡ್ರಾಯಿಂಗ್ ನಲ್ಲಿ ಅಮೇರಿಕಾ ಸ್ಟೈಲ್, ಜಪಾನ್ ಸ್ಟೈಲ್, ರಾಜ್ಕುಮಾರ್ ಸ್ಟೈಲ್, ವಿಷ್ಣು ಸ್ಟೈಲ್, ಇತ್ಯಾದಿ ಇರಬಹುದು. ಕೆದರಿದ ತಲೆಗೂದಲನ್ನು ಒಪ್ಪವಾಗಿ ಕತ್ತರಿಸಿ, ಟ್ರಿಮ್ಮಾಗಿ ಬಾಚಿದ ನಂತರ ತರಬೇತುದಾರ ಅದನ್ನು ನೋಡಿ ಅಂಕ ಕೊಡಬೇಕು! ಹೀಗೂ ತರಬೇತಿ ಶುರುವಾಗಬಹುದೇನೋ. ಲೇಡೀಸ್ ಪಾರ್ಲರ್ ಮತ್ತು ಜೆಂಟ್ಸ್ ಪಾರ್ಲರ್ ಅಂತ ಶುರುಮಾಡಲುಈಗಲೂ ತರಬೇತಿ ಇದೆಯೇನೋ ನನಗೆ ಗೊತ್ತಿಲ್ಲ. ಮಾಹಿತಿ ಇದ್ದವರು ಪ್ರತಿಕ್ರಿಯೆಯಲ್ಲಿ ಬರೆಯ ಬಹುದು.ಅಂತೂ ಸರಕಾರದ ಕಣ್ಣು ಬಿದ್ದರೆ ಫಲಿತಾಂಶ ಹೇಗಿರುತ್ತದೆಂದುಊಹಿಸುವುದು ಕಷ್ಟ ವಿಲ್ಲ.

ಹಿಂದೆಲ್ಲಾ ಅನೇಕ ಕುಲಕಸುಬುಗಳಿದ್ದವು.ಕುಂಬಾರ, ಕಮ್ಮಾರ, ಚಮ್ಮಾರ, ಬಡಗಿ, ಅಗಸ,ದರ್ಜಿ,ನೇಕಾರ ಇತ್ಯಾದಿ. ಅವೆಲ್ಲವೂ ಈಗ ಕೈಗಾರಿಕೋಧ್ಯಮದ ಯಮಪಾಶಕ್ಕೆ ಸಿಕ್ಕಿ ಕೊನೆಯುಸಿರೆಳೆದಿವೆ. ಪ್ಲಾಸ್ಟಿಕ್ ಸಾಮಾನುಗಳು ಬಂದ ಮೇಲೆ ಮಡಿಕೆ ಕುಡಿಕೆ ಮಾಯವಾಗುತ್ತಾ ಬಂತು. ಉಳಿದ ಕಸುಬುಗಳ ಸ್ಥಿತಿಯೂ ಅದೇ ಆಗಿದೆ.

ಆದರೆ ವಿಜ್ಞಾನ ಎಷ್ಟೇ ಮುಂದುವರೆದರೂ ಒಬ್ಬ ಮನುಷ್ಯನ ರೂಪ ಕಾಪಾಡಲು ಒಬ್ಬ ಕ್ಷೌರಿಕನಿಂದ ಮಾತ್ರ ಸಾಧ್ಯ.ಏಷ್ಟೇ ದೊಡ್ದವನಿದ್ದರೂ ಅತ ಕ್ಷೌರಿಕನ ಮುಂದೆ ತಲೆ ತಗ್ಗಿಸಲೇ ಬೇಕು. ಆದರೂ ಈ ವೃತ್ತಿಯಬಗ್ಗೆ ಅಸಡ್ಡೆ ಮಾತ್ರ ಸಮಾಜದಲ್ಲಿ ಇದ್ದೇ ಇದೆ.ತಮ್ಮ ಹೇರ್ ಕಟ್ಟಿಂಗ್ ಮುಗಿಸಿ ಮನೆಗೆ ತೆರಳುವಾಗ ಅದೆಷ್ಟು ಜನರು ಕಟ್ಟಿಂಗ್ ಮಾಡಿದ ವ್ಯಕ್ತಿಗೆ " ತ್ಯಾಂಕ್ಸ್" ಅಂತಾ ಹೇಳಿ ಹೋಗ್ತಾರೆ?





No comments: