Friday, January 2, 2009

ಮನ ಕದಡಿದ ಪ್ರದೀಪ

ಕಛೇರಿಯಲ್ಲಿ ಕೆಲಸ ಮಾಡುತ್ತಾ ಕುಳಿತಿದ್ದೆ. ಕ್ಯಾಲ್ಕುಲೇಟರ್,ಎಮರ್ಗೆನ್ಸಿ ಲೈಟ್, ಇತ್ಯಾದಿ ವಸ್ತುಗಳನ್ನು ಹಿಡಿದುಕೊಂಡು ಒಬ್ಬಹುಡುಗ ಬಂದ.ವಯಸ್ಸು ೧೫-೧೬ ಇರಬಹುದು. ಅವನು ತನ್ನ ವಯಸ್ಸನ್ನು ೧೮ ಅಂತಾ ಹೇಳಿದ್ದ. ವ್ಯಾಪಾರ ಮಾಡೋ ಹುಡುಗನ ವಯಸ್ಸು ಕಟ್ಟಿಕೊಂಡು ನಿಮಗೇನು ಅನ್ನ ಬೇಡಿ. ಅವನನ್ನು ನೋಡಿದಾಗ ಅವನ ಬಗೆಗೆ ತಿಳಿದುಕೊಳ್ಳಬೇಕೆನಿಸಿತು. ಪಾಪ, ಚಿಕ್ಕ ಹುಡುಗ ವ್ಯಾಪಾರ ಮಾಡೋದಕ್ಕೆ ಬಂದಿದ್ದಾನಲ್ಲಾ!!ನನ್ನ ಕಿರಿಯ ಮಗನಿಗಿಂತ ಚಿಕ್ಕವನು[ ಆರೇಳು ವರ್ಷದ ಮಾತು] ಮುಖದಲ್ಲಿ ನೋವು ಕಾಣುತ್ತಿದೆ.ಅವನು ಕೇಳುತ್ತಿದ್ದ-" ಸನ್ ಲೈಟ್ ಎನರ್ಜಿ ಸೇವರ್ ಬಲ್ಬ್ ತೆಗೆದುಕೊಳ್ಳಿ ಸಾರ್, ಒಂದಕ್ಕೆ ಒಂದು ಫ್ರೀ.ಕ್ಯಾಲ್ಕುಲೇಟರ್ ಬೇಕಾ? ಬೆಡ್ ಲೈಟ್ ಬೇಕಾ? ...............
ಯಾಂತ್ರಿಕವಾಗಿ ಆ ವಸ್ತುಗಳನ್ನು ನೋಡುತ್ತಿದ್ದರೂ ನನಗೇಕೋ ಅವನ ಬಗ್ಗೆ ಕನಿಕರ ಹೆಚ್ಚಾಗ್ತಾ ಇದೆ, ಅವನ ಬಗ್ಗೆ ತಿಳಿದುಕೊಳ್ಳುವ ಹಂಬಲ.

-" ಅಲ್ಲಾ ಮರೀ, ಓದುವ ವಯಸ್ಸಿನಲ್ಲಿ ಮಾರಾಟಕ್ಕೆ ಬಂದಿದ್ದೀಯಲ್ಲಾ! ಓದಿಯಾಯ್ತಾ?
ಹುಡುಗನ ಕಣ್ಣಲ್ಲಿ ನೀರು,
-" ಯಾಕೆ ಅಳ್ತೀಯಾ? ಕುರ್ಚಿ ಮೇಲೆ ಕುಳಿತುಕೋ, ’ ಎದುರಿಗಿದ್ದ ಕುರ್ಚಿ ತೋರಿಸಿದೆ.

- ಇಲ್ಲಾ ಸಾರ್ ನಾನು ಹೋಗ್ತೀನಿ, ನಿಮಗೆ ಲೈಟ್ ಬೇಕಾ ಸಾರ್?" ಹುಡುಗನ ಧ್ವನಿ ನೋವಿನಿಂದ ಕೂಡಿತ್ತು.
-" ಮೊದಲು ಕೂತ್ಕೊಳ್ಳೋ ಮರೀ, ಯಾಕೆ ಅಳ್ತೀಯಾ? ನಾನು ನಿನಗೆ ಮನಸ್ಸಿಗೆ ನೋವಾಗುವಂತಹ ಮಾತಾಡಿದೆನಾ?
-" ಇಲ್ಲಾ ಸಾರ್, ಯಾಕೆ ಓದಲಿಲ್ಲಾ, ಅಂದ್ರಲ್ಲಾ ಅಳು ಬಂತು." ಪಿ.ಯು.ಸಿ. ಬರೆದು ಬಂದಿದ್ದೀನಿ ಸಾರ್"
- ಮುಂದೆ ಓದಲ್ವಾ?
-ಇಲ್ಲಾ ಸಾರ್,ಕೆಲಸಾ ಮಾಡ್ತೀನಿ.
-ಯಾಕೆ ಓದುಲ್ಲಾ?
-ನಮ್ಮ ತಂದೆ ಸಾಕು, ಅಂತಾ ಹೇಳಿದಾರೆ, ನಾವು ಬಡವರು.
-ನಿಮ್ಮ ಊರು ಯಾವದು?
-ಕೋಡೀಹಳ್ಳಿ
-ಪಿ.ಯು.ಸಿ ಎಲ್ಲಿ ಓದಿದೆ?
-ಜಾವಗಲ್ ನಲ್ಲಿ
-ಎಷ್ಟು ಪರ್ಸೆಂಟ್ ಬಂತು?
-ಎಸ್.ಎಸ್.ಎಲ್.ಸಿ. ನಲ್ಲಾ ಸಾರ್?
-ಹೂ ಹೇಳು
-೪೮ ಪರ್ಸೆಂಟ್
ಬಹುಷ: ಪಿ.ಯು.ಸಿ. ತೇರ್ಗಡೆ ಆಗಿಲ್ಲದೆ ಇರಬಹುದು.ಪಾಪ! ಆಹುಡುಗನನ್ನು ನೋಡಿದಾಗ ಅಯ್ಯೋ ಎನಿಸಿತ್ತು, ನನ್ನ ಬಾಲ್ಯದ ನೆನಪು ಕಾಡಿತ್ತು.

- ನೋಡು ಮರೀ, ನಾನೂ ಬಡತನದಲ್ಲಿಯೇ ಬೆಳೆದವನು, ನಾನೇನಾದರೂ ಸಹಾಯ ಮಾಡಿದರೆ ನೀನು ಓದುತ್ತೀಯಾ?
-ಇಲ್ಲಾ ಸಾರ್, ಕೆಲಸ ಮಾಡ್ತೀನಿ.
ಅದೇನೋ ಅವನು ದುಡಿಯಲೇ ಬೇಕು ,ಎಂದು ನಿರ್ಧರಿಸಿಬಿಟ್ಟಿದ್ದ. [ನಾನೂ ಪಿ.ಯು.ಸಿ. ನಂತರ ಒಂದೆರಡು ವರ್ಷ ಜುಜುಬಿ ಕೆಲಸ ಮಾಡಿ ನಂತರ ಜೀವನದ ಆಧಾರಕ್ಕೆ ಏನೋ ಒಂದು ಓದಿದೆ] ೪-೫ ಹುಡುಗರು ಸೇರಿ ಹಾಸನದಲ್ಲಿ ರೂಮ್ ಮಾಡಿಕೊಂಡಿದ್ದಾರಂತೆ, ೫೦೦-೬೦೦ ರೂಪಾಯಿ ವ್ಯಾಪರವಾದ್ರೆ ಇವನಿಗೆ ೧೦೦-೧೨೦ ರೂಪಾಯಿ ಉಳಿಯುತ್ತದಂತೆ.ಯಜಮನರು ಊಟ ಹಾಕಿಸ್ತಾರಂತೆ.
ಅದೇನೋ ಸರಿ, ಅವನ ಬಡತನಕ್ಕಾಗಿ ಅವನ ದಾರಿ ಸರಿ ಇರಬಹುದು, ಆದರೆ...........ದೇವರು ಎಷ್ಟು ಪಕ್ಷಪಾತಿ ಅಲ್ವಾ?

ಕಾಲೇಜು ಓದುವ ಅದೆಷ್ಟೋ ಮಕ್ಕಳನ್ನು ನೋಡಿದ್ದೇನೆ, ಓದುವುದಷ್ಟೇ ಅವರ ಜವಾಬ್ದಾರಿ, ಎಂದು ಮಕ್ಕಳು ಭಾವಿಸಿರುತ್ತಾರೆ, ಪರೀಕ್ಷೆಯಲ್ಲಿ ೯೦-೯೫ ಪರ್ಸೆಂಟ್ ಮಾರ್ಕ್ ತೆಗೆದರೆ ಅದು ಅವರ ದೊಡ್ಡ ಸಾಧನೆ.
ಇಂತಹ ಅನೇಕ ಬುದ್ಧಿವಂತ ಮಧ್ಯಮ ವರ್ಗದ ಮಕ್ಕಳ ತಂದೆತಾಯಿಯರನ್ನು ನಾನು ನೋಡಿದ್ದೇನೆ.ಎಲ್ಲರ ಬಾಯಲ್ಲೂ ಒಂದೇ ಮಾತು-" ನನ್ನ ಮಗ ಈಸಾರಿ ಕೊನೆಯ ಸೆಮಿಸ್ಟರ್, ಅಬ್ಭಾ! ಹೇಗೋ ಗೆದ್ದು ಬಿಟ್ಟೆ, ಇದೊಂದು ಪರೀಕ್ಷೆ ಪಾಸಾಗಿಬಿಟ್ರೆ, ಯಾವುದಾದರೂ ಕೆಲಸಕ್ಕೆ ಹೋಗಿಬಿಡ್ತಾನೆ, ಎಂಬ ಆಶಾಗೋಪುರ ಕಟ್ಟುತ್ತಾ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಜೀವವನ್ನು ಮಕ್ಕಳಿಗೋಸ್ಕರ ತೇಯುತ್ತಾರೆ. ಆದರೆ ಮಕ್ಕಳಿಗೆ ಅವರಪ್ಪ ಅಮ್ಮನ ಕಷ್ಟ ಗೊತ್ತಾಗುತ್ತೋ ಇಲ್ಲವೋ, ಅವರು ಮಾತ್ರ , ಅಪ್ಪ ಅಮ್ಮನ ಬಗ್ಗೆ ಸ್ವಲ್ಪವೂ ತಲೆಕೆಡಸಿಕೊಳ್ಳದೆ ಪ್ರತೀ ತಿಂಗಳೂ ತಾವು ಪಡೆದ ಮಾರ್ಕ ಗಳನ್ನು ಹೇಳಿ ಸಂತೋಷ ಪಡುತ್ತಾರೆ.
ಆದರೆ ಮಕ್ಕಳು ತೆಗೆದ ಮಾರ್ಕ್ ಗಳ ಹಿಂದೆ ಅಪ್ಪ ಅಮ್ಮನ ನೋವು ಗೊತ್ತಾಗುವುದೇ ಇಲ್ಲ!

2 comments:

Harish - ಹರೀಶ said...

ನಿಜವಾದ ಮಾತು

ಹರಿಹರಪುರ ಶ್ರೀಧರ್ said...

ಧನ್ಯವಾದಗಳು
ಹರಿಹರಪುರಶ್ರೀಧರ್
Visit Sampada

http://sampada.net/user/hariharapurasridhar/content